ಬಂಧನ
ನಾಗ್ಪುರ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರಶಾಂತ್ ವೈದ್ಯ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಬುಧವಾರ ಜಾಮೀನುರಹಿತ ವಾರೆಂಟ್ ಮೇಲೆ ಬಂಧಿಸಿದ್ದಾರೆ.
ಅವರನ್ನು ನಂತರ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಮ ವೇಗಿಯಾಗಿದ್ದ ವೈದ್ಯ 1990ರ ದಶಕದ ಮಧ್ಯದಲ್ಲಿ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದರು.
ಸ್ಥಳೀಯ ವರ್ತಕರೊಬ್ಬರಿಂದ ಅವರು ಉಕ್ಕು ಖರೀದಿ ಮಾಡಿದ್ದರು. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಹೊಸದಾಗಿ ಪಾವತಿ ಮಾಡುವಂತೆ ವರ್ತಕ ಒತ್ತಾಯಿಸಿದ್ದರು ಎನ್ನಲಾಗಿದೆ. ಇದಕ್ಕೆ ವೈದ್ಯ ನಿರಾಕರಿಸಿದ್ದರಿಂದ ಅವರು ನ್ಯಾಯಾಲಯದ ಮೊರೆಹೋಗಿದ್ದರು. ಆದರೆ ವೈದ್ಯ ಅವರು ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡ ಕಾರಣ ನ್ಯಾಯಾಲಯ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು ಎಂದು ಬಜಾಜ್‌ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವಿಠ್ಠಲಸಿಂಗ್ ರಜಪೂತ್ ತಿಳಿಸಿದ್ದಾರೆ.
ವೈದ್ಯ, ಪ್ರಸ್ತುತ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.