ನವದೆಹಲಿ: ಮಹಿಳೆಯರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆಯೋಜಿಸಬೇಕು. ಅದರಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬರುವುದು ಖಚಿತ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಹೇಳಿದ್ದಾರೆ.
‘ವಿದೇಶದಲ್ಲಿ ಬಿಗ್ ಬ್ಯಾಷ್ ಮತ್ತು ಕಿಯಾ ಸೂಪರ್ ಲೀಗ್ ಟೂರ್ನಿಗಳು ಈಗ ಬಹಳಷ್ಟು ಜನಪ್ರಿಯತೆ ಗಳಿಸಿವೆ. ಆ ಲೀಗ್‌ಗಳಿಂದಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ಮಹಿಳಾ ಕ್ರಿಕೆಟ್ ಪ್ರತಿಭೆಗಳಿಗೆ ಬೆಳೆಯಲು ಉತ್ತಮ ವೇದಿಕೆ ಲಭಿಸಿದೆ. ಅದೇ ರೀತಿ ಇಲ್ಲಿಯೂ ಪೂರ್ಣಪ್ರಮಾಣದ ಐಪಿಎಲ್ ಆರಂಭಿಸಿದರೆ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ದೊಡ್ಡ ನೆರವು ಸಿಕ್ಕಂತಾಗುತ್ತದೆ. ಶೆಫಾಲಿ ವರ್ಮಾ ಅವರಂತಹ ಆಟಗಾರ್ತಿಯರು ಬೆಳಕಿಗೆ ಬಂದು ಭಾರತ ತಂಡದ ಬಲ ಹೆಚ್ಚಿಸುತ್ತಾರೆ’ ಎಂದು ಐಸಿಸಿಯ ಹಂಡ್ರೆಡ್ ಪರ್ಸೆಂಟ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಜೆಮಿಮಾ ಹೇಳಿದ್ದಾರೆ.
‘ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಆಟದಿಂದಲೇ ಶೆಫಾಲಿ ಬಗ್ಗೆ ನಮಗೆಲ್ಲ ಗೊತ್ತಾಯಿತು. ಅವರು ದೇಶಿ ಕ್ರಿಕೆಟ್‌ನಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ. ಆದರೆ ಅಂತರರಾಷ್ಟ್ರೀಯ ಆಟಗಾರ್ತಿಯರ ಎದುರು ಆಡುವ ಅವರ ಸಾಮರ್ಥ್ಯವು ಈಗ ಎಲ್ಲರ ಗಮನ ಸೆಳೆದಿದೆ. ಅವರ ನಿರ್ಭೀತವಾದ ಆಟ ಆಕರ್ಷಕವಾಗಿಯೂ ಇದೆ’ ಎಂದು ಶ್ಲಾಘಿಸಿದ್ದಾರೆ.
‘ಮಹಿಳಾ ಕ್ರಿಕೆಟ್ ತಂಡದ ಬೆಂಚ್ ಶಕ್ತಿಯನ್ನು ಹೆಚ್ಚಿಸಲು ಕೂಡ ಐಪಿಎಲ್ ಸಹಾಯಕವಾಗುವುದು. ನಮ್ಮ ಆಟದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲೂ ಇದರಿಂದ ಅನುಕೂಲವಾಗುತ್ತದೆ. ಆದ್ದರಿಂದ ಪೂರ್ಣಪ್ರಮಾಣದ ಐಪಿಎಲ್ ಟೂರ್ನಿಯನ್ನು ಆಯೋಜಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.