ADVERTISEMENT

ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ: ಸೌರವ್ ಗಂಗೂಲಿ

ಪಿಟಿಐ
Published 21 ಫೆಬ್ರುವರಿ 2025, 15:37 IST
Last Updated 21 ಫೆಬ್ರುವರಿ 2025, 15:37 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

(ಸಂಗ್ರಹ ಚಿತ್ರ)

ಕೋಲ್ಕತ್ತ: ಭಾರತ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ದಾದಾ ಖ್ಯಾತಿಯ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತ ಅತ್ಯುತ್ತಮ ಕ್ರಿಕೆಟ್ ಆಡುತ್ತಿದೆ. ಎಲ್ಲ ವಿಭಾಗದಲ್ಲಿಯೂ ಬಲಿಷ್ಠವೆನಿಸಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯವು ಭಾನುವಾರ (ಫೆ.23) ನಡೆಯಲಿದೆ. ಈ ಪಂದ್ಯದಲ್ಲೂ ಭಾರತ ಮೇಲುಗೈ ಸಾಧಿಸಲಿದೆ ಎಂದು ಗಂಗೂಲಿ ಹೇಳಿದ್ದಾರೆ.

'ನನಗೆ ತಿಳಿದಿರುವ ಹಾಗೆ ಕಳೆದ 25 ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಒಂದು ಸಲ ಮಾತ್ರ ಪಾಕಿಸ್ತಾನ ವಿರುದ್ಧ ಸೋತಿದ್ದೇವೆ. ಅದು ಚಾಂಪಿಯನ್ಸ್ ಟ್ರೋಫಿ, ಏಕದಿನ ವಿಶ್ವಕಪ್ ಅಥವಾ ಟಿ20 ವಿಶ್ವಕಪ್ ಆಗಿರಬಹುದು. ಪಾಕಿಸ್ತಾನದ ವಿರುದ್ಧ ಇತ್ತೀಚೆಗಿನ ದಾಖಲೆಯಂತೂ ಗಮನಾರ್ಹವೆನಿಸಿದೆ' ಎಂದು ಅವರು ಹೇಳಿದ್ದಾರೆ.

'ಪಾಕಿಸ್ತಾನದ ಪಾಲಿಗೆ ಭಾರತದ ವಿರುದ್ಧ ಗೆಲ್ಲುವುದು ಅಷ್ಟು ಸುಲಭವಲ್ಲ. ದುಬೈನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ದೊರಕಲಿದೆ. ಭಾರತ ತಂಡದಲ್ಲಿ ಕುಲದೀಪ್ ಯಾದವ್ ಅವರಂತಹ ಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ ವಿರುದ್ಧ ಪಾಕ್ ಬ್ಯಾಟರ್‌ಗಳ ನಿರ್ವಹಣೆ ಉತ್ತಮವಾಗಿಲ್ಲ' ಎಂದಿದ್ದಾರೆ.

ವಿಕೆಟ್ ಕೀಪರ್ ರಿಷಭ್ ಪಂತ್ ಸ್ಥಾನಕ್ಕೆ ಕೆ.ಎಲ್. ರಾಹುಲ್ ಅವರನ್ನು ಆಯ್ಕೆ ಮಾಡಿರುವ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರವನ್ನು ಗಂಗೂಲಿ ಬೆಂಬಲಿಸಿದ್ದಾರೆ.

'ಟೀಮ್ ಇಂಡಿಯಾ ಏಕದಿನದಲ್ಲಿ ಬಲಿಷ್ಠವೆನಿಸಿದೆ. ರಾಹುಲ್ ಸಾಧನೆ ಕೂಡಾ ಅತ್ಯುತ್ತಮವಾಗಿದೆ. ಇದನ್ನೇ ಗಂಭೀರ್ ಕೂಡ ಪರಿಗಣಿಸಿರಬಹುದು' ಎಂದಿದ್ದಾರೆ.

ಕಳಪೆ ಲಯದಲ್ಲಿರುವ ವಿರಾಟ್ ಕೊಹ್ಲಿ ಅವರನ್ನು ಗಂಗೂಲಿ ಬೆಂಬಲಿಸಿದ್ದಾರೆ. 'ಕೊಹ್ಲಿ ಗುಣಮಟ್ಟದ ಬ್ಯಾಟರ್ ಆಗಿದ್ದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 81 ಶತಕಗಳನ್ನು ಗಳಿಸಿದ್ದಾರೆ. ಅವರು ಆದಷ್ಟು ಬೇಗ ಲಯಕ್ಕೆ ಮರಳಲಿದ್ದಾರೆ' ಎಂದು ಹೇಳಿದ್ದಾರೆ.

ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿ ಕಾಡುತ್ತಿದ್ದರೂ ಮೊಹಮ್ಮದ್ ಶಮಿ ಅವರನ್ನು ಹಗುರವಾಗಿ ಪರಿಗಣಿಸಬಾರದು ಎಂದು ಗಂಗೂಲಿ ಹೇಳಿದ್ದಾರೆ.

'2023ರ ಏಕದಿನ ವಿಶ್ವಕಪ್‌ನಲ್ಲೂ ಶಮಿ ಭಾರತದ ಪರ ಅತಿ ಹೆಚ್ಚು ವಿಕೆಟ್ (24) ಗಳಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಗಳಿಸಿರುವುದು ನನ್ನಲ್ಲಿ ಅಚ್ಚರಿಯನ್ನಂಟು ಮಾಡಿಲ್ಲ. ನಿಸ್ಸಂಶಯವಾಗಿಯೂ ಬೂಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಆದರೆ ಶಮಿ ಕೂಡ ಹಿಂದೆ ಬಿದ್ದಿಲ್ಲ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.