ADVERTISEMENT

ಐಪಿಎಲ್ ಕುರಿತು ಸೌರವ್ ಹೇಳಿಕೆ ಆಶಾದಾಯಕ: ಇರ್ಫಾನ್ ಪಠಾಣ್

ಪಿಟಿಐ
Published 17 ಜೂನ್ 2020, 12:37 IST
Last Updated 17 ಜೂನ್ 2020, 12:37 IST
ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್   

ನವದೆಹಲಿ: ಇದೇ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ನಡೆಸುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಯು ಆಶಾದಾಯಕವಾಗಿದೆ ಎಂದು ಹಿರಿಯ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.

‘ಐಪಿಎಲ್ ಆಯೋಜಿಸಲು ಸರ್ವಪ್ರಯತ್ನ ಮಾಡಲಾಗುತ್ತಿದೆಯೆಂದು ಗಂಗೂಲಿ ಹೇಳಿದ್ದಾರೆ. ಅವರ ಹೇಳಿಕೆಯಿಂದ ಬಹಳ ಸಂತಸವಾಗಿದೆ. ಟೂರ್ನಿ ಆರಂಭವಾಗಲಿ ಎಂಬುದು ಬಹುತೇಕ ಎಲ್ಲರ ಆಶಯವಾಗಿದೆ’ ಎಂದು ಇರ್ಫಾನ್ ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದ್ಧಾರೆ.

‘ಆಸ್ಟ್ರೇಲಿಯಾದಲ್ಲಿ ಇದೇ ಅಕ್ಟೋಬರ್‌–ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಆಯೋಜನೆಯ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಅಲ್ಲಿ ಟೂರ್ನಿ ನಡೆಯುವುದು ಅನುಮಾನವೆನಿಸುತ್ತಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಎಷ್ಟೇ ಸಣ್ಣ ನಿಯಮವಿದ್ದರೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದ್ದರಿಂದ ಅಲ್ಲಿಯ ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸಿ ಯಾವ ರೀತಿಯ ನಿಯಮಗಳನ್ನು ವಿಧಿಸುತ್ತದೆ ಎಂಬುದರ ಮೇಲೆ ಕ್ರಿಕೆಟ್ ಟೂರ್ನಿಯ ತೀರ್ಮಾನವಾಗುತ್ತದೆ’ ಎಂದು ಆಲ್‌ರೌಂಡರ್ ಇರ್ಫಾನ್ ಹೇಳಿದ್ದಾರೆ.

ADVERTISEMENT

‘ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಕ್ವಾರಂಟೈನ್ ನಿಯಮವೂ ಸೇರಿದಂತೆ ಎಲ್ಲದರ ಕುರಿತು ಸಮಗ್ರವಾಗಿ ಯೋಚಿಸುತ್ತಾರೆ. ಆದ್ದರಿಂದ ಅಲ್ಲಿಯ ಟೂರ್ನಿ ಆಯೋಜನೆಯೂ ಕಷ್ಟಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.

‘ಆದ್ದರಿಂದ ಐಪಿಎಲ್ ಆಯೋಜನೆಯು ಬಹುತೇಕ ಸಫಲವಾಗುವ ನಿರೀಕ್ಷೆ ಮೂಡಿದೆ. ಅಲ್ಲದೇ ಸ್ವತಃ ಗಂಗೂಲಿ ನೀಡಿರುವ ಹೇಳಿಕೆಯು ಮಹತ್ವದ್ದು. ಇದು ಭಾರತದ ಕ್ರಿಕೆಟಿಗರಿಗೆ ಮಾತ್ರವಲ್ಲ, ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲ ದೇಶಗಳ ಆಟಗಾರರಿಗೂ ಸಿಹಿಸುದ್ದಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಾನು ಕೂಡ ಐಪಿಎಲ್ ಆಯೋಜನೆಯನ್ನು ಎದುರು ನೋಡುತ್ತಿದ್ದೇನೆ. ಎಲ್ಲ ಕ್ರಿಕೆಟಿಗರಿಗೂ ಉತ್ತೇಜನ ತುಂಬುವ ಟೂರ್ನಿ ಇದಾಗಲಿದೆ’ ಎಂದು ಇರ್ಫಾನ್ ಹೇಳಿದ್ದಾರೆ.

ಈ ನಡುವೆ ಸೆಪ್ಟೆಂಬರ್ 26ರಿಂದ ನವೆಂಬರ್‌ 8ರವರೆಗೆ ಐಪಿಎಲ್ ಆಯೋಜಿಸಲು ಬಿಸಿಸಿಐ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯ ಕುರಿತು ನಿರ್ಧಾರ ಕೈಗೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎರಡು ಬಾರಿ ಸಭೆ ನಡೆಸಿತ್ತು. ಆದರೆ ಮುಂದಿನ ತಿಂಗಳು ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ.

‘ಇದೇ ವರ್ಷ ಟೂರ್ನಿಯ ಆಯೋಜನೆಯು ಅವಾಸ್ತವಿಕ ಯೋಜನೆಯಾಗಿದೆ’ ಎಂದು ಕ್ರಿಕೆಟ್ ಆಸ್ಟ್ರೆಲಿಯಾದ ಮುಖ್ಯಸ್ಥರೂ ಹೇಳಿದ್ದರು. ಆದ್ದರಿಂದ ವಿಶ್ವಕಪ್ ಟೂರ್ನಿಯು ರದ್ದಾಗುವ ಅಥವಾ ಮುಂದೂಡಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇದರಿಂದಾಗಿ ಐಪಿಎಲ್‌ ಆಯೋಜನೆಯ ನಿರೀಕ್ಷೆಯು ಗರಿಗೆದರಿದೆ.

ಐಪಿಎಲ್ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಯೇ ಹೆಚ್ಚಾಗಿದೆ. ಐಪಿಎಲ್ ಭಾರತ ಅಥವಾ ಯಾವುದೇ ದೇಶದಲ್ಲಿ ನಡೆದರೂ ಟಿವಿಯಲ್ಲಿ ವೀಕ್ಷಕರ ಸಂಖ್ಯೆಯು ಹೆಚ್ಚಾಗಲಿದೆ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಸಹಮಾಲೀಕ ನೆಸ್‌ ವಾಡಿಯಾ ಕೂಡ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.