ಶುಭಮನ್ ಗಿಲ್ ಮತ್ತು ಗ್ರೇಗ್ ಚಾಪೆಲ್
ನವದೆಹಲಿ: ಭಾರತ ತಂಡದ ‘ಯುವ ನಾಯಕ’ ಶುಭಮನ್ ಗಿಲ್ ಅವರಿಗೆ ನಿಜವಾದ ಪರೀಕ್ಷೆ ಈಗ ಎದುರಾಗಿದೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಗ್ರೇಗ್ ಚಾಪೆಲ್ ಹೇಳಿದ್ದಾರೆ.
ಇಂಗ್ಲೆಂಡ ವಿರುದ್ಧದ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಗಿಲ್ ನಾಯಕನಾಗಿ ಪದಾರ್ಪಣೆ ಮಾಡಿದ್ದಾರೆ. ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ 2–1ರ ಮುನ್ನಡೆಯಲಿದೆ. ಇನ್ನೆರಡು ಪಂದ್ಯಗಳು ಬಾಕಿ ಇವೆ.
ಅದರಲ್ಲೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯವು ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಇಂಗ್ಲೆಂಡ್ ಒಂದೊಮ್ಮೆ ಈ ಪಂದ್ಯದಲ್ಲಿ ಜಯಿಸಿದರೆ ಸರಣಿ ಕೈವಶ ಮಾಡಿಕೊಳ್ಳುವುದು. ಭಾರತ ಗೆದ್ದರೆ ಸರಣಿ ಸಮಬಲಕ್ಕೆ ಬರುವುದು. ಐದನೇ ಪಂದ್ಯವು ನಿರ್ಣಾಯಕವಾಗುವ ಸಾಧ್ಯತೆ ಇದೆ. ಆದ್ದರಿಂದ ಭಾರತವನ್ನು ಸರಣಿ ಸೋಲಿನಿಂದ ತಪ್ಪಿಸಲು ನಾಲ್ಕನೇ ಪಂದ್ಯದ ಜಯ ಅನಿವಾರ್ಯವಾಗಿದೆ.
ಈ ಕುರಿತು ‘ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಡಾಟ್ ಕಾಮ್ ವೆಬ್‌ಸೈಟ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಚಾಪೆಲ್, ‘ಇವತ್ತಿನ ಕ್ರಿಕೆಟ್‌ನಲ್ಲಿರುವ ವಾತಾವರಣದಲ್ಲಿ ಬೆಳೆಯುವುದು ಸುಲಭವಲ್ಲ. ಈ ಸವಾಲು ಎದುರಿಸಲು ಗಿಲ್ ಸಿದ್ಧರಾಗಿಯೇ ಇರಬೇಕು. ಅವರು ತಮಗೆ ಎಂತಹ ತಂಡ ಇರಬೇಕು ಎಂಬ ಸ್ಪಷ್ಟ ದೃಷ್ಟಿಕೋನ ಹೊಂದಿರಬೇಕು. ಮಾತುಗಳಿಂದಷ್ಟೇ ಅಲ್ಲ; ಕ್ರಿಯಾತ್ಮಕವಾಗಿ, ಗುರಿಯಲ್ಲಿ ಸ್ಪಷ್ಟತೆ ಮತ್ತು ಉತ್ತಮ ದರ್ಜೆಯ ನೋಟಗಳನ್ನು ಹೊಂದಿರಬೇಕು. ತಾತ್ಪರ್ಯ ಏನೆಂದರೆ, ಕಠುಕಠಿಣವಾದ ಶಿಸ್ತು ರೂಢಿಸಿಕೊಳ್ಳಬೇಕು. ಭಾರತ ತಂಡವು ಕಳಪೆ ಫೀಲ್ಡಿಂಗ್‌ನಿಂದಾಗಿ ಹಿನ್ನಡೆ ಅನುಭವಿಸುವುದು ಸಲ್ಲದು. ಸುಲಭವಾಗಿ ರನ್‌ಗಳನ್ನು ಬಿಟ್ಟುಕೊಡಬಾರದು. ಕ್ಯಾಚ್ ಅವಕಾಶಗಳನ್ನು ಬಿಡಬಾರದು’ ಎಂದರು.
‘ಆಯ್ಕೆಗಾರರು ಮತ್ತು ಗಿಲ್ ಜೊತೆಯಾಗಿ ತಂಡದ ಪ್ರಮುಖ ಆಟಗಾರರನ್ನು ಗುರುತಿಸಬೇಕು. ತಾವು ನಂಬಿಕೆ ಇಡಬಹುದಾದ ಆಟಗಾರರನ್ನು ಗಿಲ್ ಆಯ್ಕೆ ಮಾಡಿಕೊಳ್ಳುವುದು ಒಳಿತು. ಪಂದ್ಯದ ಯೋಜನೆಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬ ಆಟಗಾರನಿಗೂ ತಂಡವು ತಮ್ಮಿಂದ ಏನು ನಿರೀಕ್ಷಿಸುತ್ತದೆ ಎಂಬುದರ ಸ್ಪಷ್ಟ ಅರಿವು ಇರಬೇಕು’ ಎಂದು ಚಾಪೆಲ್ ಸಲಹೆ ನೀಡಿದರು.
‘ಉತ್ತಮ ನಾಯಕರು ಶ್ರೇಷ್ಠ ಸಂವಹನಕಾರರಾಗಿರುತ್ತದೆ. ಗಿಲ್ ಅವರು ಅಂತಹ ನಾಯಕರಾಗಬಲ್ಲರು. ಅದೂ ಶೀಘ್ರ ಸಮಯದಲ್ಲಿ. ತಾಲೀಮು ಸಂದರ್ಭದಲ್ಲಿ, ಡ್ರೆಸಿಂಗ್ ರೂಮ್‌ನಲ್ಲಿ, ಪಂದ್ಯದ ನಡುವಿನ ವಿರಾಮದಲ್ಲಿ ಅವರು ಶಾಂತಚಿತ್ತದ ಸಂವಹನ ನಡೆಸುವುದರೊಂದಿಗೆ ತಮ್ಮ ಗುರಿ ಸಾಧಿಸಬಹುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.