ADVERTISEMENT

ಅರ್ಜುನ ಪ್ರಶಸ್ತಿಗೆ ಪ್ರಣಯ್: ಕೋಚ್ ಗೋಪಿಚಂದ್ ಶಿಫಾರಸು

ಪಿಟಿಐ
Published 21 ಜೂನ್ 2020, 19:01 IST
Last Updated 21 ಜೂನ್ 2020, 19:01 IST
ಎಚ್‌.ಎಸ್. ಪ್ರಣಯ್
ಎಚ್‌.ಎಸ್. ಪ್ರಣಯ್   

ನವದೆಹಲಿ: ಬ್ಯಾಡ್ಮಿಂಟನ್ ಆಟಗಾರ ಎಚ್‌.ಎಸ್. ಪ್ರಣಯ್ ಅವರಿಗೆ ಅರ್ಜುನ ಪ್ರಶಸ್ತಿ ನೀಡಬೇಕು ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಶಿಫಾರಸು ಮಾಡಿದ್ದಾರೆ.

ಟೂರ್ನಿಯೊಂದರಲ್ಲಿ ಅಶಿಸ್ತಿನ ವರ್ತನೆ ತೋರಿದ್ದರು ಎಂಬ ಕಾರಣವೊಡ್ಡಿ ಪ್ರಣಯ್ ಅವರನ್ನು ಎರಡು ವರ್ಷಗಳಿಂದ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರಲಿಲ್ಲ.

ಆಟಗಾರರಾದ ಸಾತ್ವಿಕ್ ಸಾಯಿರಾರ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ ಮತ್ತು ಸಮೀರ್ ವರ್ಮಾ ಅವರಿಗೆ ಪ್ರಶಸ್ತಿ ನೀಡುವಂತೆ ಜೂನ್ 2ರಂದು ಬಿಎಐ ಶಿಫಾರಸು ಮಾಡಿತ್ತು. ಆ ಸಂದರ್ಭದಲ್ಲಿ ಪ್ರಣಯ್ ಟ್ವಿಟರ್ ಮೂಲಕ ತಮ್ಮ ಸಮಾಧಾನವನ್ನು ವ್ಯಕ್ತಪಡಿಸಿದ್ದರು.

ADVERTISEMENT

‘ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದವನನ್ನು ಈ ಬಾರಿಯೂ ಬಿಎಐ ಕಡೆಗಣಿಸಿದೆ. ಅದೇ ಹಳೆಯ ಕತೆ ಮರುಕಳಿಸಿದೆ. ಆದರೆ ಈ ಯಾವುದೇ ದೊಡ್ಡ ಕೂಟಗಳಲ್ಲಿ ಆಡದಿರುವ ಆಟಗಾರನ ಹೆಸರನ್ನು ಸಲ್ಲಿಸಿದೆ. ವಾಹ್, ಈ ದೇಶದ ತಮಾಷೆಯಿದು’ ಎಂದು ಪ್ರಣಯ್ ಟ್ವೀಟ್ ಮಾಡಿದ್ದರು. ಅವರು ಈಗ ಆ ಸಂದೇಶವನ್ನು ಅಳಿಸಿಹಾಕಿದ್ದಾರೆ.

ಗೋಪಿಚಂದ್ ಅವರು ಜೂನ್ 3ರಂದೇ ಪ್ರಣಯ್ ಹೆಸರನ್ನು ಶಿಫಾರಸು ಮಾಡಿದ್ದರೆನ್ನಲಾಗಿದೆ. ಖೇಲ್ ರತ್ನ ಪುರಸ್ಕೃತರು ಅರ್ಜುನ ಪ್ರಶಸ್ತಿಗಾಗಿ ಆಟಗಾರರ ಹೆಸರುಗಳನ್ನು ಶಿಫಾರಸು ಮಾಡಬಹುದು. ಆ ಅವಕಾಶವನ್ನು ಗೋಪಿ, ಪ್ರಣಯ್‌ಗಾಗಿ ಬಳಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಗೋಪಿ ಮುಖ್ಯ ಕೋಚ್ ಸ್ಥಾನದ ವಿವೇಚನೆ ಕೋಟಾ ಬಳಸಿಕೊಂಡಿಲ್ಲ. ಬಿಎಐ ಪ್ರಣಯ್ ಹೆಸರನ್ನು ಶಿಫಾರಸು ಮಾಡಿಲ್ಲ ಎಂಬ ಕಾರಣಕ್ಕೆ ಗೋಪಿಚಂದ್ ತಮ್ಮ ಖೇಲ್‌ ರತ್ನ ಪುರಸ್ಕಾರದ ಕೋಟಾ ಬಳಸಿಕೊಂಡಿದ್ದಾರೆ. ಆದರೆ ಇದರ ಕಾನೂನಾತ್ಮಕ ಪರಿಣಾಮದ ಕುರಿತು ಅವರಿಗೆ ಅರಿವಿಲ್ಲವೆನಿಸುತ್ತದೆ’ ಎಂದು ಬಿಎಐ ಮೂಲಗಳು ಹೇಳಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಗೋಪಿಚಂದ್ ಮತ್ತು ಪ್ರಣಯ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಲಭ್ಯರಾಗಲಿಲ್ಲ.

ಬಿಎಐ ವಿರುದ್ಧ ಮಾತನಾಡಿದ್ದಕ್ಕೆ ಪ್ರಣಯ್ ಅವರಿಗೆ ಹೋದ ಶುಕ್ರವಾರ ಶೋಕಾಸ್ ನೋಟಿಸ್ ನೀಡಲಾಗಿದೆ. 15 ದಿನಗಳೊಳಗೆ ಉತ್ತರಿಸಲು ಗಡುವು ಕೊಡಲಾಗಿದೆ.

‘ಪ್ರಣಯ್ ವಿರುದ್ಧ ಹಲವು ಬಾರಿ ಶಿಸ್ತು ಕ್ರಮಗಳನ್ನು ತೆಗೆದುಕೊಂಡ ನಿದರ್ಶನಗಳಿವೆ. ಬಿಎಐ ಅವರ ಬಗ್ಗೆ ಬಹಳಷ್ಟು ಸಹನೆಯಿಂದಲೇ ವರ್ತಿಸಿದೆ. ಸಾಕಷ್ಟು ಅವಕಾಶಗಳನ್ನೂ ಕೊಟ್ಟಿದೆ. ಆದರೂ ಅವರ ವರ್ತನೆಗಳಲ್ಲಿ ಸುಧಾರಣೆಯಾಗುತ್ತಿಲ್ಲ. ಬಿಎಐ ನಿಯಮಬದ್ಧವಾಗಿ ನಡೆದುಕೊಂಡಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.