ADVERTISEMENT

ಗೆಲುವಿನ ಹಾದಿಗೆ ಮರಳಲು ಟೈಟನ್ಸ್‌ ಚಿತ್ತ: ಗಿಲ್ ಬಳಗಕ್ಕೆ ಕಮಿನ್ಸ್ ಪಡೆ ಸವಾಲು

ಪಿಟಿಐ
Published 2 ಮೇ 2025, 1:59 IST
Last Updated 2 ಮೇ 2025, 1:59 IST
ಶುಭಮನ್‌ ಗಿಲ್‌   
ಶುಭಮನ್‌ ಗಿಲ್‌      

ಅಹಮದಾಬಾದ್: ರಾಜಸ್ಥಾನ ರಾಯಲ್ಸ್‌ ತಂಡದ 14ರ ಪೋರ ವೈಭವ್ ಸೂರ್ಯವಂಶಿಯ ಶತಕದ ಭರಾಟೆಗೆ ಬೆಚ್ಚಿ ಬಿದ್ದಿದ್ದ ಗುಜರಾತ್ ಟೈಟನ್ಸ್‌ ತಂಡ ಶುಕ್ರವಾರ ನಡೆಯುವ ಐ‍ಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯಲಿದೆ.

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಆತಿಥೇಯರಿಗೆ ಮಹತ್ವದ್ದಾಗಿದೆ. 9 ಪಂದ್ಯಗಳನ್ನು ಆಡಿ 6ರಲ್ಲಿ ಜಯಿಸಿ, 3ರಲ್ಲಿ ಸೋತಿರುವ ಶುಭಮನ್ ಗಿಲ್ ನಾಯಕತ್ವದ ಬಳಗವು ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ತನ್ನ ಪಾಲಿಗೆ ಉಳಿದಿರುವ 5 ಪಂದ್ಯಗಳಲ್ಲಿ ಕನಿಷ್ಠ ಮೂರಲ್ಲಿ ಗೆದ್ದರೆ ಪ್ಲೇ ಆಫ್‌ ಹಾದಿ ಸುಗಮವಾಗಲಿದೆ.

ಅದಕ್ಕಾಗಿ ತಂಡದಲ್ಲಿರುವ ಕೆಲವು ಲೋಪಗಳನ್ನು ಸುಧಾರಿಸಿಕೊಂಡು ಕಣಕ್ಕಿಳಿಯಬೇಕಿದೆ. ಈಚೆಗೆ ರಾಜಸ್ಥಾನ ತಂಡಕ್ಕೆ 210 ರನ್‌ಗಳ ಗುರಿಯನ್ನು ಒಡ್ಡಿದ್ದ ಗಿಲ್ ಬಳಗದ ಬೌಲರ್‌ಗಳು ನಿಖರ ದಾಳಿ ನಡೆಸುವಲ್ಲಿ ಎಡವಿದರು. ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಅವರ ಆರಂಭಿಕ ಜೊತೆಯಾಟವನ್ನು ಬೇಗನೇ ಮುರಿಯುವಲ್ಲಿ ವಿಫಲರಾದರು.

ADVERTISEMENT

ಇದ್ದುದರಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ನರ್ ರಶೀದ್ ಖಾನ್ ಅವರಿಬ್ಬರೇ ಆ ಪಂದ್ಯದಲ್ಲಿ ವಿಕೆಟ್ ಪಡೆದಿದ್ದರು. ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ ಅವರು ದುಬಾರಿಯಾಗಿದ್ದರು.

ಆದರೆ ಟೂರ್ನಿಯುದ್ದಕ್ಕೂ ಉತ್ತಮವಾಗಿ ಬೌಲಿಂಗ್ ಮಾಡಿರುವ ಸ್ಪಿನ್ನರ್ ಸಾಯಿಕಿಶೋರ್ ಅವರಿಗೆ ಆ ಪಂದ್ಯದಲ್ಲಿ ಕೇವಲ 1 ಓವರ್‌ ಬೌಲಿಂಗ್ ಮಾಡುವ ಅವಕಾಶ ಮಾತ್ರ ಸಿಕ್ಕಿತ್ತು. ಅದರಲ್ಲಿಯೂ ಅವರು 16 ರನ್‌ ಕೊಟ್ಟಿದ್ದರು. ಗುಜರಾತ್ ಬೌಲಿಂಗ್ ಪಡೆಯು ಹೈದರಾಬಾದ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಅಗತ್ಯವಿದೆ. ಇಲ್ಲದಿದ್ದರೆ ಅಬ್ಬರದ ಆಟಕ್ಕೆ ಹೆಸರಾಗಿರುವ ಸನ್‌ರೈಸರ್ಸ್ ಬ್ಯಾಟರ್‌ಗಳು ರನ್ ಹೊಳೆ ಹರಿಸಿದರೂ ಅಚ್ಚರಿಯಿಲ್ಲ. ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ತಂಡವು ಪ್ಲೇ ಆಫ್‌ ಹಾದಿಯಿಂದ ದೂರದಲ್ಲಿಯೇ ಇದೆ. ಆದರೂ ಪಟ್ಟಿಯಲ್ಲಿ ಮೇಲೇರಲು ಪ್ರಯತ್ನಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಈಚೆಗೆ ಸನ್‌ರೈಸರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸಿತ್ತು. ತಂಡದ ಅನುಭವಿ ಬೌಲರ್‌ ಮೊಹಮ್ಮದ್ ಶಮಿ, ಉತ್ತಮ ಲಯದಲ್ಲಿರುವ ಹರ್ಷಲ್ ಪಟೇಲ್, ಪ್ಯಾಟ್ ಕಮಿನ್ಸ್ ಅವರ ಮುಂದೆ ಟೈಟನ್ಸ್ ತಂಡದ ಗಿಲ್, ಸಾಯಿ ಸುದರ್ಶನ್ ಜೋಸ್ ಬಟ್ಲರ್ ಅವರನ್ನು ನಿಯಂತ್ರಿಸುವ ಸವಾಲಿದೆ.

ಸನ್‌ರೈಸರ್ಸ್ ತಂಡದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶಕುಮಾರ್ ರೆಡ್ಡಿ ಹಾಗೂ ಹೆನ್ರಿಚ್ ಕ್ಲಾಸನ್ ಅವರು ತಮ್ಮ ನೈಜ ಆಟಕ್ಕೆ ಕುದುರಿಕೊಂಡರೆ ಗುಜರಾತ್ ತಂಡದ ಒತ್ತಡ ಹೆಚ್ಚುವುದು ಖಚಿತ.

ಪಂದ್ಯ ಆರಂಭ : ರಾತ್ರಿ 7.30

ಪ್ಯಾಟ್‌ ಕಮಿನ್ಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.