
ವಡೋದರ: ಗುಜರಾತ್ ಜೈಂಟ್ಸ್ ತಂಡವು ಶುಕ್ರವಾರ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್‌ಗಳಿಂದ ಮಣಿಸಿ ಎಲಿಮಿನೇಟರ್‌ಗೆ ಅರ್ಹತೆ ಪಡೆಯಿತು.
ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು 7 ವಿಕೆಟ್‌ಗೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 82; 48ಎ, 4x8, 6x4) ಅವರ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ.
ಎರಡು ಬಾರಿಯ ಚಾಂಪಿಯನ್ ಮುಂಬೈ (6 ಅಂಕ) ತಂಡದ ಪ್ಲೇ ಆಫ್ ಭವಿಷ್ಯ ಭಾನುವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ (6 ಅಂಕ) ಮತ್ತು ಯು.ಪಿ ವಾರಿಯರ್ಸ್ (4 ಅಂಕ) ಪಂದ್ಯದ ಮೇಲೆ ನಿಂತಿದೆ. ಆ ಪಂದ್ಯದಲ್ಲಿ ವಾರಿಯರ್ಸ್ ಗೆದ್ದರೆ ಮುಂಬೈ ತಂಡಕ್ಕೆ ‘ಅದೃಷ್ಟ’ದ ಬಾಗಿಲು ತೆರೆಯಲಿದೆ.
ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. 37 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟರ್‌ಗಳು ಪೆವಿಲಿಯನ್ ಸೇರಿಸಿದ್ದರು. ಹರ್ಮನ್‌ಪ್ರೀತ್ ಮತ್ತು ಅಮೆಲಿಯಾ ಕೇರ್ (20) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 45 ರನ್ ಸೇರಿಸಿದರು. ಒಂದೆಡೆ ವಿಕೆಟ್‌ಗಳು ನಿಯಮಿತವಾಗಿ ಉರುಳುತ್ತಿದ್ದರೆ, ಮತ್ತೊಂದೆಡೆ ಹರ್ಮನ್‌ಪ್ರೀತ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಆದರೆ, ಗೆಲುವಿಗೆ ಅದು ಸಾಕಾಗಲಿಲ್ಲ.
ಇದಕ್ಕೂ ಮೊದಲು ನಾಯಕಿ ಆ್ಯಷ್ಲೆ ಗಾರ್ಡನರ್ (46;28ಎ) ಮತ್ತು ಜಾರ್ಜಿಯಾ ವೆರ್ಹಾಮ್ (ಔಟಾಗದೇ 44;26ಎ) ಅವರ ದಿಟ್ಟ ಬ್ಯಾಟಿಂಗ್ ಬಲದಿಂದ ಗುಜರಾತ್ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಮುಂಬೈ ಬೌಲರ್ ಶಬ್ನಿಮ್ ಇಸ್ಮಾಯಿಲ್ ಅವರು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಪೆಟ್ಟು ಕೊಟ್ಟರು. ಬೆತ್ ಮೂನಿ (5) ಅವರ ವಿಕೆಟ್ ಗಳಿಸಿದರು. ಈ ಹಂತದಲ್ಲಿ ಸೋಫಿ ಡಿವೈನ್ (25;21ಎ) ಮತ್ತು ಅನುಷ್ಕಾ ಶರ್ಮಾ (33; 31ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿ ಚೇತರಿಕೆ ನೀಡಿದರು.
ಅಮೆಲಿಯಾ ಕೆರ್ ಅವರು ಅನುಷ್ಕಾ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು. ಎರಡು ಓವರ್‌ಗಳ ನಂತರ ಸೋಫಿ ಕೂಡ ಔಟಾದರು. ಈ ಸಂದರ್ಭದಲ್ಲಿ ಗಾರ್ಡನರ್ ಮತ್ತು ಜಾರ್ಜಿಯಾ ತಂಡದ ಬಲ ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರು:
ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 4ಕ್ಕೆ167 (ಸೋಫಿ ಡಿವೈನ್ 25, ಅನುಷ್ಕಾ ಶರ್ಮಾ 33, ಆ್ಯಷ್ಲೆ ಗಾರ್ಡನರ್ 46, ಜಾರ್ಜಿಯಾ ವೆರ್ಹಾಮ್ ಔಟಾಗದೇ 44, ಅಮೆಲಿಯಾ ಕೆರ್ 26ಕ್ಕೆ2).
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 156 (ಸಂಜೀವನ ಸಂಜನಾ 26, ಹರ್ಮನ್‌ಪ್ರೀತ್ ಕೌರ್ ಔಟಾಗದೇ 82; ಸೋಫಿ ಡಿವೈನ್ 23ಕ್ಕೆ 2, ಜಾರ್ಜಿಯಾ ವೆರ್ಹಾಮ್ 26ಕ್ಕೆ 2). ಪಂದ್ಯದ ಆಟಗಾರ್ತಿ: ಜಾರ್ಜಿಯಾ ವೆರ್ಹಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.