ADVERTISEMENT

ಧೋನಿ ಮತ್ತೆಂದೂ ಭಾರತದ ಪರ ಆಡೊಲ್ಲ: ಹರಭಜನ್ ಸಿಂಗ್

ಹಿರಿಯ ಕ್ರಿಕೆಟಿಗ ಹರಭಜನ್‌ ಸಿಂಗ್‌ ಅನಿಸಿಕೆ

ಏಜೆನ್ಸೀಸ್
Published 24 ಏಪ್ರಿಲ್ 2020, 19:40 IST
Last Updated 24 ಏಪ್ರಿಲ್ 2020, 19:40 IST
ಮಹೇಂದ್ರ ಸಿಂಗ್‌ ಧೋನಿ (ಮಧ್ಯ) ಹಾಗೂ ಹರಭಜನ್‌ ಸಿಂಗ್‌ (ಬಲತುದಿ) 
ಮಹೇಂದ್ರ ಸಿಂಗ್‌ ಧೋನಿ (ಮಧ್ಯ) ಹಾಗೂ ಹರಭಜನ್‌ ಸಿಂಗ್‌ (ಬಲತುದಿ)    

ನವದೆಹಲಿ: ‘ಮಹೇಂದ್ರ ಸಿಂಗ್‌ ಧೋನಿ ಅವರು ಮತ್ತೊಮ್ಮೆ ಭಾರತ ತಂಡದಲ್ಲಿ ಆಡುವುದು ಅನುಮಾನ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಹರಭಜನ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಅನುಭವಿ ಆಫ್‌ಸ್ಪಿನ್ನರ್‌ ಹರಭಜನ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ. ಧೋನಿ ಈ ತಂಡದ ನಾಯಕರಾಗಿದ್ದಾರೆ.

38 ವರ್ಷ ವಯಸ್ಸಿನ ಧೋನಿ, ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದರು. ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ADVERTISEMENT

ಧೋನಿ ಅವರು ಐಪಿಎಲ್‌ 13ನೇ ಆವೃತ್ತಿಯಲ್ಲಿ ಉತ್ತಮ ಸಾಮರ್ಥ್ಯ ತೋರಿ, ಮುಂಬರುವ ಟ್ವೆಂಟಿ–20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದರು. ಈ ಬಾರಿಯ ಐಪಿಎಲ್‌ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಹೀಗಾಗಿ ಧೋನಿ ವಿಶ್ವಕಪ್‌ ಕನಸು ಬಹುತೇಕ ಕಮರಿದೆ.

‘ಧೋನಿ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರು ಮತ್ತೊಮ್ಮೆ ನೀಲಿ ಜೆರ್ಸಿ ತೊಟ್ಟು (ಭಾರತದ ಪರ) ಅಂಗಳಕ್ಕಿಳಿಯುವುದಿಲ್ಲ. 2019ರ ಏಕದಿನ ವಿಶ್ವಕಪ್‌ ತನ್ನ ಪಾಲಿಗೆ ಕೊನೆಯದ್ದು ಎಂದು ಅವರು ನಿರ್ಧರಿಸಿ ಆಗಿದೆ. ಐಪಿಎಲ್‌ನಲ್ಲಿ ಅವರ ಆಟ ಮುಂದುವರಿಯಲಿದೆ’ ಎಂದು ಹರಭಜನ್‌ ತಿಳಿಸಿದ್ದಾರೆ.

‘ನಿವೃತ್ತಿ, ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಅವರೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಮಿಂಚುವ ಗುರಿ ಹೊಂದಿದ್ದ ಧೋನಿ, ಇದಕ್ಕಾಗಿ ಸಾಕಷ್ಟು ಮುಂಚಿತವಾಗಿಯೇ ಸಿದ್ಧತೆ ಕೈಗೊಂಡಿದ್ದರು. ಧೋನಿ ನಿವೃತ್ತಿ ವಿಷಯದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಹೀಗಿದ್ದರೂ ಅವರು ಮೌನ ಮುರಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.