ADVERTISEMENT

ಆಯ್ಕೆ ಸಮಿತಿಗೆ ಸಮರ್ಥರ ನೇಮಕವಾಗಬೇಕು: ಹರಭಜನ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:43 IST
Last Updated 25 ನವೆಂಬರ್ 2019, 19:43 IST
ಹರಭಜನ್‌ ಸಿಂಗ್‌
ಹರಭಜನ್‌ ಸಿಂಗ್‌   

ನವದೆಹಲಿ (ಪಿಟಿಐ): ‘ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವವರನ್ನು ತೆಗೆದು ಹಾಕಿ ಅವರ ಜಾಗಕ್ಕೆ ದಕ್ಷ ವ್ಯಕ್ತಿಗಳನ್ನು ನೇಮಿಸಬೇಕಿದೆ. ಈ ಕೆಲಸ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಂದ ಮಾತ್ರ ಸಾಧ್ಯ’ ಎಂದು ಹಿರಿಯ ಆಟಗಾರ ಹರಭಜನ್‌ ಸಿಂಗ್‌ ತಿಳಿಸಿದ್ದಾರೆ.

ತವರಿನಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿಗೆ ಕೇರಳದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಆಯ್ಕೆಯಾಗಿದ್ದರು. ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಿರಲಿಲ್ಲ.

ಈ ಬಗ್ಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ADVERTISEMENT

‘ಬಾಂಗ್ಲಾ ಎದುರಿನ ಸರಣಿಗೆ ಆಯ್ಕೆಯಾಗಿದ್ದ ಸಂಜು ಅವರನ್ನು ತಂಡದ ಆಡಳಿತ ಮಂಡಳಿಯು ಸಹ ಆಟಗಾರರಿಗೆ ಪಾನೀಯ ನೀಡುವುದಕ್ಕಷ್ಟೇ ಬಳಸಿಕೊಂಡಿತು. ಅವರಿಗೆ ಯಾವ ಪಂದ್ಯದಲ್ಲೂ ಕಣಕ್ಕಿಳಿಸದಿರುವುದು ಬೇಸರದ ಸಂಗತಿ’ ಎಂದು ತರೂರ್‌ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಹರಭಜನ್‌ ‘ಆಯ್ಕೆ ಸಮಿತಿಯು ಸಂಜು ಅವರ ಸಹನೆಯನ್ನು ಪರೀಕ್ಷಿಸುತ್ತಿದೆ. ಈಗಿರುವ ಆಯ್ಕೆ ಸಮಿತಿ ಬದಲಾಗಬೇಕಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

25 ವರ್ಷದ ಸ್ಯಾಮ್ಸನ್‌, ಈ ಸಲದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಿಂದ 112ರನ್‌ ಗಳಿಸಿದ್ದರು.

ಸ್ಯಾಮ್ಸನ್‌ ಅವರು 2015ರಲ್ಲಿ ಅಂತರರಾಷ್ಟ್ರೀಯ ಟ್ವೆಂಟಿ–20 ಮಾದರಿಗೆ ಪದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ಎದುರಿನ ಪಂದ್ಯ ಅವರ ಪಾಲಿಗೆ ಮೊದಲ ಮತ್ತು ಕೊನೆಯದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.