ADVERTISEMENT

ಯುವ ಆಟಗಾರರೊಂದಿಗೆ ಸಾಮರ್ಥ್ಯ ಪರೀಕ್ಷೆಗೆ ಸಿದ್ಧ: ಹರ್ಭಜನ್ ಸಿಂಗ್

ಪಿಟಿಐ
Published 17 ಜುಲೈ 2020, 14:27 IST
Last Updated 17 ಜುಲೈ 2020, 14:27 IST
ಹರ್ಭಜನ್ ಸಿಂಗ್ -ಪ್ರಜಾವಾಣಿ ಚಿತ್ರ
ಹರ್ಭಜನ್ ಸಿಂಗ್ -ಪ್ರಜಾವಾಣಿ ಚಿತ್ರ   

ನವದೆಹಲಿ: ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡ ಚಿಗುರುಮೀಸೆಯ ಹುಡುಗ ಹರ್ಭಜನ್ ಸಿಂಗ್ 22 ಕ್ರಿಕೆಟ್ ಋತುಗಳ ಬಳಿಕವೂ ಸವಾಲುಗಳನ್ನು ಎದುರಿಸಿ ಗೆಲ್ಲುವಲ್ಲಿ ನಿಸ್ಸೀಮ. 40 ವರ್ಷದ ಹರ್ಭಜನ್ ಸಿಂಗ್ ’ಯುವ ಆಟಗಾರರ ಜೊತೆ ಸಾಮರ್ಥ್ಯ ‍ಪರೀಕ್ಷೆಗೆ ಒಡ್ಡಿ ನೋಡಿ, ನಾನು ಗೆದ್ದು ತೋರಿಸುವೆ‘ ಎಂದು ಸವಾಲು ಹಾಕಿ ಗಮನ ಸೆಳೆದಿದ್ದಾರೆ.

ಸುದ್ದಿಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಈ ಆಫ್‌ಸ್ಪಿನ್ನರ್ ’ದೇಶದ ಅತ್ಯುತ್ತಮ ಸ್ಪಿನ್ನರ್‌ಗಳು ಎಂದು ನೀವು ಯಾರನ್ನು ಪರಿಗಣಿಸುತ್ತೀರೋ ಅವರನ್ನು ನನ್ನ ಮುಂದೆ ನಿಲ್ಲಿಸಿ‘ ಎಂದು ಹೇಳಿದರಲ್ಲದೆ ’ವಯಸ್ಸು ಕೆಲವು ಸಂದರ್ಭದಲ್ಲಿ ಮಾತ್ರ ಗಣನೆಗೆ ಬರುತ್ತದೆ‘ ಎಂದರು. 103 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್ ಉರುಳಿಸಿರುವಹರ್ಭಜನ್ ಮೂರೂ ಮಾದರಿಗಳಲ್ಲಿ ಒಟ್ಟು 711 ವಿಕೆಟ್ ಕಬಳಿಸಿದ್ದಾರೆ.

’ಒಟ್ಟು 800 ದಿನಗಳನ್ನು ಅಂಗಣದಲ್ಲಿ ಕಳೆದಿದ್ದೇನೆ. ನನ್ನಂಥ ಆಟಗಾರನಿಗೆ ಯಾರ ಹಂಗಿನಲ್ಲೂ ಬದುಕಬೇಕಾದ ಅಗತ್ಯವಿಲ್ಲ. ನೆಟ್ಸ್‌ನಲ್ಲಿ ತಿಂಗಳಿಗೆ ಎರಡು ಸಾವಿರ ಎಸೆತಗಳನ್ನು ಹಾಕಬಲ್ಲೆ. ನನ್ನಲ್ಲಿರುವ ಸಾಮರ್ಥ್ಯವನ್ನು ತಿಳಿಸಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ರವಿ ಬಿಷ್ಣೋಯ್ ಮತ್ತು ಕಾರ್ತಿಕ್ ತ್ಯಾಗಿ ಅವರಂಥ ಯುವ ಬೌಲರ್‌ಗಳು ಜನಿಸುವಾಗ ಹರ್ಭಜನ್ ಸಿಂಗ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ವಿಷಯ ಗಮನಕ್ಕೆ ತಂದಾಗ ಅವರು ’ನನಗೆ ತುಂಬ ವಯಸ್ಸಾಗಿದೆ ಎಂಬುದು ನಿಮ್ಮ ಮಾತಿನ ಮರ್ಮ ಅಲ್ಲವೇ? ಹೌದು, ವಯಸ್ಸಾಗಿದೆ. ಅದಕ್ಕೆ ತಕ್ಕಂತೆ ಅನುಭವವೂ ಇದೆ. ವೃತ್ತಿ ಬದುಕಿನಲ್ಲಿ ಏಳು ಬೀಳುಗಳನ್ನು ಕಂಡಿದ್ದೇನೆ. ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಿಸಿದ ಪರಮಾತ್ಮನಿಗೆ ಋಣಿ‘ ಎಂದರು.

’22 ವರ್ಷಗಳ ವೃತ್ತಿ ಬದುಕಿನಲ್ಲಿ ಪ್ರತಿದಿನವೂ ಪರೀಕ್ಷಾ ಕಾಲವಾಗಿತ್ತು. ಕೆಲವು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಲಭಿಸಿವೆ. ಕೆಲವು ಬೇಸರ ತರಿಸಿವೆ. ಭಾರತದಂಥ ತಂಡದಲ್ಲಿ ಆಡುವಾಗ ಯಶಸ್ಸು ಗಳಿಸಿದಾಗಲೆಲ್ಲ ಹೆಚ್ಚು ಸಂಭ್ರಮಿಸುವಂತಿಲ್ಲ. ಯಾಕೆಂದರೆ ಮರುದಿನವೇ ಮತ್ತೊಂದು ಸವಾಲು ನಮ್ಮನ್ನು ಕಾಯುತ್ತಿರುತ್ತದೆ‘ ಎಂದು ಹರ್ಭಜನ್ ಹೇಳಿದರು.

’ಸವಾಲುಗಳನ್ನು ಸ್ವೀಕರಿಸಲು ಖುಷಿಯಾಗುತ್ತದೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಅಂಗಣದಲ್ಲಿ ಆಡುವಾಗ ಸವಾಲುಗಳು ಏನೆಂದು ನಿಜವಾಗಿ ತಿಳಿಯುತ್ತದೆ. ವೃತ್ತಿಬದುಕಿಗೆ ಯಾವಾಗ ವಿದಾಯ ಹೇಳುತ್ತೇನೆ ಎಂದು ಹೇಳಲಾಗದು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಕೊನೆಯ ಆವೃತ್ತಿ ಯಾವಾಗ ಎಂದು ಹೇಳಲೂ ಸಾಧ್ಯವಿಲ್ಲ. ನಾಲ್ಕು ತಿಂಗಳ ವ್ಯಾಯಾಮ, ವಿರಾಮ ಮತ್ತು ಯೋಗಾಸನದ ನಂತರ ಹೊಸ ಹುರುಪು ಬಂದಿದೆ‘ ಎಂದು 160 ಐಪಿಎಲ್ ಪಂದ್ಯಗಳಲ್ಲಿ 150 ವಿಕೆಟ್ ಉರುಳಿಸಿರುವ ಹರ್ಭಜನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.