ADVERTISEMENT

ಹಿಂದಿನ ಏಳು ತಿಂಗಳು ಯಾತನೆ ಅನುಭವಿಸಿದ್ದೆ

ಮುಂಬೈ ಇಂಡಿಯನ್ಸ್‌ ಗೆಲುವಿನ ರೂವಾರಿ ಹಾರ್ದಿಕ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:37 IST
Last Updated 4 ಏಪ್ರಿಲ್ 2019, 19:37 IST
ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ   

ಮುಂಬೈ: ‘ಹಿಂದಿನ ಏಳು ತಿಂಗಳು ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಈ ಅವಧಿಯಲ್ಲಿ ಸಾಕಷ್ಟು ಯಾತನೆ ಅನುಭವಿಸಿದ್ದೆ’ ಎಂದು ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.

‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾರ್ದಿಕ್‌, ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅವರನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅಮಾನತು ಮಾಡಿತ್ತು. ಹಾರ್ದಿಕ್‌, ಬಹಿರಂಗ ಕ್ಷಮೆ ಕೇಳಿದ ಬಳಿಕ ಶಿಕ್ಷೆ ರದ್ದು ಪಡಿಸಲಾಗಿತ್ತು.

ಬುಧವಾರ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಐಪಿಎಲ್‌ ಪಂದ್ಯದಲ್ಲಿ ಹಾರ್ದಿಕ್‌, ಆಲ್‌ರೌಂಡ್‌ ಆಟ ಆಡಿ ಗಮನ ಸೆಳೆದಿದ್ದರು. ಎಂಟು ಎಸೆತಗಳಲ್ಲಿ ಅಜೇಯ 25ರನ್‌ ಬಾರಿಸಿದ್ದ ಅವರು ಮೂರು ವಿಕೆಟ್‌ ಕಬಳಿಸಿ ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಭಾಜನರಾಗಿದ್ದರು.

ADVERTISEMENT

‘ಗಾಯದ ಸಮಸ್ಯೆ ಮತ್ತು ವಿವಾದದಲ್ಲಿ ಸಿಲುಕಿದ್ದರಿಂದ ಕೆಲ ತಿಂಗಳು ಅಂಗಳದಿಂದ ದೂರ ಉಳಿಯಬೇಕಾಗಿತ್ತು. ಆ ಸಮಯದಲ್ಲಿ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿರಲಿಲ್ಲ. ಭಾರತ ತಂಡಕ್ಕೆ ಮರಳಿದ ನಂತರ ಕೆಲ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅವುಗಳು ಸವಾಲಿನದ್ದಾಗಿದ್ದವು. ನೋವು, ಅವಮಾನಗಳನ್ನು ಮರೆತು ಕಠಿಣ ಅಭ್ಯಾಸ ನಡೆಸಿದೆ. ಆ ಮೂಲಕ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳುವತ್ತ ಚಿತ್ತ ಹರಿಸಿದೆ. ಅದಕ್ಕೆ ಈಗ ಫಲ ಸಿಕ್ಕಿದೆ. ನನ್ನ ಆಲ್‌ರೌಂಡ್‌ ಆಟದಿಂದಾಗಿ ಮುಂಬೈ ಗೆದ್ದಿದೆ. ಹೀಗಾಗಿ ಅತೀವ ಖುಷಿಯಾಗಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

‘ಸಂಕಷ್ಟದ ದಿನಗಳಲ್ಲಿ ಧೈರ್ಯ ತುಂಬಿ, ಮತ್ತೆ ಅಂಗಳಕ್ಕೆ ಮರಳಲು ನೆರವಾದ ಕುಟುಂಬದವರು ಮತ್ತು ಆತ್ಮೀಯ ಸ್ನೇಹಿತರಿಗೆ ಆಭಾರಿಯಾಗಿದ್ದೇನೆ. ಚೆನ್ನೈ ಎದುರು ಸಿಕ್ಕ ‘ಪಂದ್ಯ ಶ್ರೇಷ್ಠ’ ಗೌರವನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ. ಐಪಿಎಲ್‌ನ ಎಲ್ಲಾ ಪಂದ್ಯಗಳಲ್ಲಿ ಶ್ರೇಷ್ಠ ಆಟ ಆಡುವುದರತ್ತ ಮಾತ್ರ ಈಗ ಚಿತ್ತ ಹರಿಸಿದ್ದೇನೆ. ಭಾರತ ತಂಡ ಈ ಬಾರಿ ಖಂಡಿತವಾಗಿಯೂ ಏಕದಿನ ವಿಶ್ವಕಪ್‌ ಗೆಲ್ಲಲಿದೆ’ ಎಂದು ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾಯಿತು: ‘ಪಂದ್ಯದ ಆರಂಭದ 10–12 ಓವರ್‌ಗಳಲ್ಲಿ ಎದುರಾಳಿಗಳ ಮೇಲೆ ಒತ್ತಡ ಹೇರಿದ್ದೆವು. ನಂತರ ನಮ್ಮ ಆಟಗಾರರು ಕೆಲ ಕ್ಯಾಚ್‌ಗಳನ್ನು ಬಿಟ್ಟರು. ಕ್ಷೇತ್ರರಕ್ಷಣೆಯಲ್ಲೂ ಎಡವಟ್ಟು ಮಾಡಿದರು. ಜೊತೆಗೆ ‘ಡೆತ್‌ ಓವರ್‌’ಗಳಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದರಿಂದ ಮುಂಬೈ ಎದುರು ಸೋತೆವು’ ಎಂದು ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೇಳಿದರು.

‘ಗಾಯದ ಸಮಸ್ಯೆ ಕೂಡಾ ತಂಡವನ್ನು ಕಾಡುತ್ತಿದೆ. ಇದೇ ಕಾರಣದಿಂದ ಡೇವಿಡ್‌ ವಿಲ್ಲಿ ಮತ್ತು ಲುಂಗಿ ಗಿಡಿ ತಂಡಕ್ಕೆ ಅಲಭ್ಯರಾಗಿದ್ದಾರೆ. ಪ್ರತಿ ಪಂದ್ಯಕ್ಕೂ ಮುನ್ನ ಪಿಚ್‌ ಪರಿಶೀಲಿಸಿ ನಂತರ ಆಡುವ ಬಳಗದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದಿದ್ದಾರೆ.

‘ಹಿಂದಿನ ಕೆಲ ಲೀಗ್‌ಗಳಲ್ಲಿ ಕೊನೆಯ ಘಟ್ಟದಲ್ಲಿ ಸತತವಾಗಿ ಪಂದ್ಯಗಳನ್ನು ಗೆದ್ದು ‘ಪ್ಲೇ ಆಫ್‌’ ಪ್ರವೇಶಿಸಿದ್ದವು. ಈ ಬಾರಿ ಅದಕ್ಕೆ ಆಸ್ಪದ ನೀಡಬಾರದು ಅಂದುಕೊಂಡಿದ್ದೇವೆ. ಹೀಗಾಗಿ ಆರಂಭದಿಂದಲೇ ಪರಿಣಾಮಕಾರಿ ಸಾಮರ್ಥ್ಯ ತೋರಿ ಗೆಲುವು ದಾಖಲಿಸುತ್ತಾ ಹೋಗಲು ನಿರ್ಧರಿಸಿದ್ದೇವೆ’ ಎಂದು ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

‘ಹಾರ್ದಿಕ್‌, ನೆಟ್ಸ್‌ನಲ್ಲಿ ಕಠಿಣ ತಾಲೀಮು ನಡೆಸುತ್ತಾರೆ. ಹೀಗಾಗಿ ಪಂದ್ಯದ ದಿನ ಲೀಲಾಜಾಲವಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಾ ತಂಡದ ಮೊತ್ತ ಹೆಚ್ಚಿಸುತ್ತಾರೆ. ಅವರ ಆಟ ಪದಗಳಿಗೆ ನಿಲುಕದ್ದು’ ಎಂದು ಕೀರನ್‌ ‍ಪೊಲಾರ್ಡ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಂಡ್ಯ ಬಗ್ಗೆ ಫ್ಲೆಮಿಂಗ್ ಮೆಚ್ಚುಗೆ
ಬುಧವಾರದ ಪಂದ್ಯದಲ್ಲಿಮುಂಬೈಗೆ ಗೆಲುವು ತಂದುಕೊಟ್ಟ ಹಾರ್ದಿಕ್‌ ಪಾಂಡ್ಯ ಬಗ್ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹಾರ್ದಿಕ್‌ ‍ಪ್ರತಿಭಾನ್ವಿತ ಆಟಗಾರ. ನಾನು ಅವರ ದೊಡ್ಡ ಅಭಿಮಾನಿ. ಅವ ರಲ್ಲಿ ಅದಮ್ಯ ವಿಶ್ವಾಸ ಇದೆ. ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಆಟದ ಮೂಲಕ ರನ್‌ ಮಳೆ ಸುರಿಸಿದ್ದು ಇದಕ್ಕೆ ಸಾಕ್ಷಿ. ಹಾರ್ದಿಕ್‌, ಮುಂಬೈ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿ ಸಿಕೊಂಡಿ ದ್ದಾರೆ. ವಿಶ್ವ ಶ್ರೇಷ್ಠ ಬೌಲರ್‌ಗಳ ಸದ್ದ ಡಗಿಸುವ ತಾಕತ್ತು ಅವರಲ್ಲಿದೆ’ ಎಂದು ಪ್ರಶಂಶಿಸಿದ್ದಾರೆ.

‘ಮುಂಬೈ ಎದುರು ಆರಂಭದಲ್ಲಿ ನಮ್ಮ ಬೌಲರ್‌ಗಳು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಆದರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಹೆಚ್ಚು ರನ್‌ಬಿಟ್ಟುಕೊಟ್ಟಿದ್ದು ಮುಳುವಾಯಿತು’ ಎಂದು ಫ್ಲೆಮಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.