ಕೇರಳದ ಆದಿತ್ಯ ಸರವಟೆ ಅವರ ವಿಕೆಟ್ ಪಡೆದ ವಿದರ್ಭದ ಎಡಗೈ ಸ್ಪಿನ್ನರ್ ಹರ್ಷ್ ದುಬೆ ಅವರನ್ನು ಸಹ ಆಟಗಾರರು ಅಭಿನಂದಿಸಿದರು.
ಪಿಟಿಐ ಚಿತ್ರ
ನಾಗ್ಪುರ: ವಿದರ್ಭ ತಂಡ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಕೇರಳ ವಿರುದ್ಧ 37 ರನ್‌ಗಳ ಮಹತ್ವದ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಉದಯೋನ್ಮುಖ ಎಡಗೈ ಸ್ಪಿನ್ನರ್ ಹರ್ಷ ದುಬೆ (88ಕ್ಕೆ3) ಅವರು ಒಂದೇ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಗೆ ಭಾಜನರಾದರು.
22 ವರ್ಷ ವಯಸ್ಸಿನ ದುಬೆ ಇದುವರೆಗೆ 69 ವಿಕೆಟ್‌ಗಳನ್ನು ಪಡೆದಿದ್ದು, ಬಿಹಾರದ ಎಡಗೈ ಸ್ಪಿನ್ನರ್ ಅಶುತೋಷ್ ಅಮನ್ 2018–19ರಲ್ಲಿ ಸ್ಥಾಪಿಸಿದ್ದ 68 ವಿಕೆಟ್‌ಗಳ ದಾಖಲೆ ಮುರಿದರು.
ಇದೇ ಮೊದಲ ಬಾರಿ ಫೈನಲ್‌ನಲ್ಲಿ ಆಡುತ್ತಿರುವ ಕೇರಳ ಮೂರನೇ ದಿನವೂ ಪ್ರತಿರೋಧ ತೋರಿಸಿತು. ಆಲ್‌ರೌಂಡರ್ ಆದಿತ್ಯ ಸರವಟೆ (79, 185 ಎಸೆತ) ಹೋರಾಟದ ನಂತರ ನಾಯಕ ಸಚಿನ್ ಬೇಬಿ ವೀರೋಚಿತ ಇನಿಂಗ್ಸ್ ಆಡಿ 98 ರನ್ (235 ಎಸೆತ, 4x10) ಬಾರಿಸಿದರು. ಆದರೆ ಕೇರಳ ಅಂತಿಮವಾಗಿ ದಿನದ ಕೊನೆಯ ಓವರಿನಲ್ಲಿ 342 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ 379 ರನ್ ಗಳಿಸಿತ್ತು.
ವಿದರ್ಭ ಬೌಲರ್‌ಗಳಾದ ಹರ್ಷ ದುಬೆ, ದರ್ಶನ್ ನಲ್ಕಂಡೆ (52ಕ್ಕೆ3) ಮತ್ತು ಪಾರ್ಥ ರೇಖಡೆ (65ಕ್ಕೆ3) ಅವರು ತಲಾ ಮೂರು ವಿಕೆಟ್‌ಗಳನ್ನು ಪಡೆದರು.
3 ವಿಕೆಟ್‌ಗೆ 131 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಕೇರಳ ಮೊದಲು ಸರವಟೆ ಅವರನ್ನು ಕಳೆದುಕೊಂಡಿತು. ದುಬೆ ಈ ಮಹತ್ವದ ವಿಕೆಟ್ ಪಡೆದರು. ನಾಗ್ಪುರದವರಾದ ಸರವಟೆ, ನಿರೀಕ್ಷೆ ಮೀರಿ ಪುಟಿದ ಚೆಂಡನ್ನು ಆಡಲು ಹೋಗಿ ಸಿಲಿ ಪಾಯಿಂಟ್‌ನಲ್ಲಿದ್ದ ಬದಲಿ ಫೀಲ್ಡಿರ್ ಅಮನ್ ಮೋಖಡೆಗೆ ಕ್ಯಾಚಿತ್ತರು. ಇದರಿಂದ ಸಚಿನ್ ಜೊತೆ 63 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟ ಮುರಿಯಿತು.
ಸಚಿನ್ ಬೇಬಿ ಅವರನ್ನು ಒಳಗೊಂಡು ಕೊನೆಯ 3 ವಿಕೆಟ್‌ಗಳು 18 ರನ್ನಿಗೆ ಉರುಳಿದವು. ನೆಲಕಚ್ಚಿ ಆಡುತ್ತಿದ್ದ ಸಚಿನ್, ಎಡಗೈ ಸ್ಪಿನ್ನರ್ ಪಾರ್ಥ ರೇಖಡೆ ಬೌಲಿಂಗ್‌ನಲ್ಲಿ ಆಫ್ ಸ್ಟಂಪ್ ಆಚೆಯಿದ್ದ ಚೆಂಡನ್ನು ಸ್ಲಾಗ್ ಸ್ವೀಪ್ ಮಾಡಿದರು. ಆದರೆ ಅದು ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಕರುಣ್ ನಾಯರ್ ಕೈಸೇರಿದಾಗ ಕೇರಳದ ಮುನ್ನಡೆ ಆಸೆ ಕರಗಿತು.
ಸಚಿನ್ ಮೂರು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ನಿಸಾರ್ (21, 42ಎ) ಜೊತೆ ಐದನೇ ವಿಕೆಟ್‌ಗೆ 49 ರನ್, ವಿಕೆಟ್ ಕೀಪರ್ ಮೊಹಮ್ಮದ್ ಅಜರುದ್ದೀನ್ (34, 59ಎ) ಜೊತೆ ಆರನೇ ವಿಕೆಟ್‌ಗೆ 59 ರನ್ ಮತ್ತು ಜಲಜ್ ಸಕ್ಸೇನ (28) ಜೊತೆ ಏಳನೇ ವಿಕೆಟ್‌ಗೆ 46 ರನ್ ಪೇರಿಸಿ ಏಳನೆಯವರಾಗಿ (324) ನಿರ್ಗಮಿಸಿದ್ದರು. 13 ರನ್ ನಂತರ ಜಲಜ್ ಅವರು ರೇಖಡೆ ಬೌಲಿಂಗ್‌ನಲ್ಲಿ ಪ್ಯಾಡಲ್ ಸ್ವೀಪ್‌ಗೆ ಹೋಗಿ ಬೌಲ್ಡ್ ಆದರು.
ಆದರೆ ದುಬೆ ತಮ್ಮ ಮೂರನೇ ವಿಕೆಟ್‌ಗೆ ಹೆಚ್ಚು ಶ್ರಮ ಹಾಕಿದರು. ಅಂತಿಮವಾಗಿ ಎಂ.ಡಿ.ನಿಧೀಶ್ ಅವರನ್ನು ಎಲ್‌ಬಿ ಬಲೆಗೆ ಕೆಡವಿ ಋತುವಿನ 69ನೇ ವಿಕೆಟ್ ಪಡೆದು ಸಂಭ್ರಮಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 123.1 ಓವರುಗಳಲ್ಲಿ 379; ಕೇರಳ: ಮೊದಲ ಇನಿಂಗ್ಸ್: 125 ಓವರುಗಳಲ್ಲಿ 342 (ಆದಿತ್ಯ ಸರವಟೆ 79, ಸಚಿನ್ ಬೇಬಿ 98; ದರ್ಶನ್ ನಲ್ಕಂಡೆ 52ಕ್ಕೆ3, ಹರ್ಷ ದುಬೆ 88ಕ್ಕೆ3, ಪಾರ್ಥ ರೇಖಡೆ 65ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.