ಮುಂಬೈ: ಮಧ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್, ಈಗ ರದ್ದಾಗಿರುವ ‘ಕೊಚ್ಚಿ ಟಸ್ಕರ್ಸ್ ಕೇರಳ’ ಐಪಿಎಲ್ ಫ್ರಾಂಚೈಸಿಗೆ ₹538 ಕೋಟಿ ಪಾವತಿಸುವಂತೆ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಚಾಗ್ಲಾ ಅವರಿದ್ದ ಏಕಸದಸ್ಯ ಪೀಠ, ‘ಮಧ್ಯಸ್ಥಿಕೆ ತೀರ್ಪನ್ನು ತಡೆಹಿಡಿಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ’ ಎಂದಿದೆ.
2010ರ ಐಪಿಎಲ್‌ನಲ್ಲಿ ಭಾಗವಹಿಸಿದ್ದ ಕೊಚ್ಚಿ ಟಸ್ಕರ್ಸ್ ತಂಡವನ್ನು ಫ್ರಾಂಚೈಸಿ ಒಪ್ಪಂದ ಉಲ್ಲಂಘನೆಯ ಆರೋಪದ ಮೇಲೆ ಸೆಪ್ಟೆಂಬರ್ 2011ರಲ್ಲಿ ಬಿಸಿಸಿಐ ವಜಾಗೊಳಿಸಿತ್ತು. ಈ ತಂಡವನ್ನು ಮೊದಲು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್‌ಎಸ್‌ಡಬ್ಲ್ಯೂ) ಒಕ್ಕೂಟ, ನಂತರ ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್) ನಿರ್ವಹಿಸಿತ್ತು.
ಬಿಸಿಸಿಐ ವಿರುದ್ಧ 2012ರಲ್ಲಿ ಕೆಸಿಪಿಎಲ್ ಮತ್ತು ಆರ್‌ಎಸ್‌ಡಬ್ಲ್ಯೂ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದವು. 2015ರಲ್ಲಿ ತೀರ್ಪು ನೀಡಿದ ನ್ಯಾಯಾಲಯ, ಕೆಸಿಪಿಎಲ್‌ಗೆ ₹384.8 ಕೋಟಿ ನೀಡುವಂತೆ, ಆರ್‌ಎಸ್‌ಡಬ್ಲ್ಯೂಗೆ ಬಡ್ಡಿ ಸಮೇತವಾಗಿ ₹153.3 ಕೋಟಿ ಹಿಂದಿರುಗಿಸುವಂತೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.