ರವಿಚಂದ್ರನ್ ಅಶ್ವಿನ್
ಚೆನ್ನೈ: ‘ಮಗನ ಹಠಾತ್ ನಿವೃತ್ತಿ ನಿರ್ಧಾರ ತಮ್ಮನ್ನೂ ಅಚ್ಚರಿಗೆ ಕೆಡವಿತು. ಆದರೆ ಅವರ ಆ ನಿರ್ಧಾರದ ಹಿಂದೆ ಸ್ವಾಭಿಮಾನಕ್ಕೆ ಕುಂದುಂಟಾಗುವ ಪ್ರಸಂಗ ಒಳಗೊಂಡಿರುವ ಸಾಧ್ಯತೆಯೂ ಇದೆ’ ಎಂಬ ಸ್ಫೋಟಕ ಸುಳಿವನ್ನು ತಂದೆ ರವಿಚಂದ್ರನ್ ನೀಡಿದ್ದಾರೆ.
‘ಕೊನೆಯ ಗಳಿಗೆಯಲ್ಲಿ ನನಗೆ ಈ ಬಗ್ಗೆ (ನಿವೃತ್ತಿ) ಗೊತ್ತಾಯಿತು. ಅವರು ಈ ರೀತಿ ನಿರ್ಧಾರಕ್ಕೆ ಬರಲು ಹಲವು ಕಾರಣಗಳಿರಬಹುದು. ಅದು ಅಶ್ವಿನ್‌ಗೇ ಗೊತ್ತು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿರಲೂಬಹುದು’ ಎಂದು ರವಿಚಂದ್ರನ್ ಅವರು ಸಿಎನ್‌ಎನ್ ನ್ಯೂಸ್ 18 ವಾಹಿನಿಗೆ ತಿಳಿಸಿದ್ದಾರೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ 537 ವಿಕೆಟ್‌ಗಳನ್ನು ಪಡೆದಿರುವ ಆಫ್ ಸ್ಪಿನ್ನರ್ ಅಶ್ವಿನ್ ಅವರನ್ನು ಕೂರಿಸಿ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗಿತ್ತು. ನಂತರ ಆಡಿಲೇಡ್‌ನ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಹಿರಿಯ ಬೌಲರ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅವರಿಗೆ ಮತ್ತೆ ಬೆಂಚ್ ಗತಿಯಾಗಿತ್ತು.
ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿರುವ ಕಾರಣ ಅಶ್ವಿನ್ ನಿವೃತ್ತಿ ಹೇಳಬಹುದು ಎಂದು ಕುಟುಂಬವು ಕೆಲಸಮಯದಿಂದ ನಿರೀಕ್ಷಿಸಿತ್ತು ಎಂದು ರವಿಚಂದ್ರನ್ ಹೇಳಿದರೂ, ಅದರ ನಿರ್ದಿಷ್ಟ ಸ್ವರೂಪ ಬಿಡಿಸಿ ಹೇಳಲಿಲ್ಲ.
ಅಶ್ವಿನ್ ಸ್ಪಷ್ಟನೆ: ‘ನನ್ನ ತಂದೆ ಮಾಧ್ಯಮಗಳ ಮುಂದೆ ಮಾತನಾಡಲು ಅನುಭವ ಹೊಂದಿಲ್ಲ. ಅವರ ಪ್ರತಿಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದು ಹೇಳುವ ಮೂಲಕ ಅಶ್ವಿನ್, ತಂದೆಯ ಹೇಳಿಕೆ ವಿವಾದಕ್ಕೆ ತಿರುಗದಂತೆ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.
‘ನೀವೆಲ್ಲಾ ಅವರನ್ನು ಕ್ಷಮಿಸಿ. ಅವರನ್ನು ಅವರ ಪಾಡಿಗೆ ಇರಲು ಬಿಡಿ ಎಂದು ವಿನಂತಿಸುವೆ’ ಎಂದು ಅಶ್ವಿನ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.