ಅಡಿಲೇಡ್: ಟ್ರಾವಿಡ್ ಹೆಡ್ ಭಾರತ ತಂಡಕ್ಕೆ ‘ಹೆಡ್ಡೇಕ್’ನಿಂದ ‘ಮೈಗ್ರೇನ್’ ಆಗಿ ಪರಿಣಮಿಸಿದರು. ಈ ಎಡಗೈ ಬ್ಯಾಟರ್ ಸೊಗಸಾದ ಶತಕ ಸಿಡಿಸಿದರು. ಅದರ ಹೊಳಪು ಅಡಿಲೇಡ್ ಓವಲ್‌ನ ಬೆಳಕಿಗಿಂತ ಹೆಚ್ಚು ಪ್ರಕಾಶಮಾನವಾಯಿತು. ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಅವರು ಭಾರತದ ಕೈಯಿಂದ ಬಹುತೇಕ ಕಸಿದುಕೊಂಡಿದ್ದಾರೆ.
2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ 163 ರನ್‌ಗಳ ಅವಿಸ್ಮರಣೀಯ ಇನಿಂಗ್ಸ್ ಕಟ್ಟಿದ್ದ ಹೆಡ್ ಈಗ ಭಾರತದ ವಿರುದ್ಧವೇ, ನಿರ್ಣಾಯಕ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಶತಕ (140, 141ಎಸೆತ, 17x4, 4x6) ಪೋಣಿಸಿದರು. ಇದರಿಂದ ಆಸ್ಟ್ರೇಲಿಯಾ ಪಿಂಕ್‌ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಸುಭದ್ರ ಸ್ಥಿತಿಗೆ ತಲುಪಿತು. ಕ್ರೀಡಾಂಗಣದಲ್ಲಿ ಭರ್ತಿಯಾಗಿದ್ದ ಪ್ರೇಕ್ಷಕರು ತವರು ತಂಡದ ಆಟವನ್ನು ಸಂಪೂರ್ಣವಾಗಿ ಆಸ್ವಾದಿಸಿದರು.
ದಿನದಾಟ ಮುಗಿದಾಗ ಭಾರತ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 128 ರನ್ ಗಳಿಸಿ ಅಪಾಯದಲ್ಲಿದೆ. ಭಾರತದ 180 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 337 ರನ್ ಗಳಿಸಿ, 157 ರನ್‌ಗಳ ಮುನ್ನಡೆ ಸಂಪಾದಿಸಿತು. ಭಾರತ ಇನ್ನೂ 29 ರನ್ ಹಿಂದೆಯಿದೆ.
ಹೊನಲು ಬೆಳಕಿನಡಿ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಸ್ಟ್ರೇಲಿಯಾದ ದಾಳಿ ಬಿಗುವಾಗಿದ್ದು ವೇಗಿಗಳು ಗುಲಾಬಿ ಚೆಂಡನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಬೆಳೆಸಲು ಆಗಲಿಲ್ಲ. ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿ ಕೂಡ ನಿರಾಸೆ ಮೂಡಿಸಿದರು.
ಆರನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ (6, 15ಎ) ಮತ್ತೆ ಪರದಾಡಿದರು. ಒಮ್ಮೆ ಔಟ್ ಆದಾಗ ಅದು ನೋಬಾಲ್ ಆಗಿತ್ತು. ಆದರೆ ಕೆಲವೇ ಹೊತ್ತಿನ ನಂತರ ಪ್ಯಾಟ್ ಕಮಿನ್ಸ್ ಅವರು ಆಫ್‌ಸ್ಟಂಪ್ ನೇರಕ್ಕೆ ಹಾಕಿದ ಎಸೆತವನ್ನು ಸರಿಯಾಗಿ ಅಂದಾಜಿಸದೇ ಬೌಲ್ಡ್ ಆದರು.
ರಿಷಭ್ ಪಂತ್ (ಔಟಾಗದೇ 28, 4x5) ಮತ್ತು ನಿತೀಶ್ ರೆಡ್ಡಿ (ಔಟಾಗದೇ 15, 4x3) ಅವರ ಆಕ್ರಮಣದ ಆಟ ಪಂದ್ಯವನ್ನು ಮೂರನೇ ದಿನಕ್ಕೆ ಬೆಳೆಸಿದೆ.
ಮಧ್ಯಾಹ್ನ ಭಾರತ ತಂಡವು ಒಂದು ಹಂತದಲ್ಲಿ ಆಸ್ಟ್ರೇಲಿಯಾವನ್ನು (ಶುಕ್ರವಾರ: 1ಕ್ಕೆ86) ಬೇಗನೇ ಕಟ್ಟಿಹಾಕುವಂತೆ ಕಂಡಿತ್ತು. 11 ರನ್ ಅಂತರದಲ್ಲಿ ಆರಂಭ ಆಟಗಾರ ಮೆಕ್‌ಸ್ವೀನಿ ಮತ್ತು ಹಳೆಹುಲಿ ಸ್ಟೀವ್ ಸ್ಮಿತ್ ನಿರ್ಗಮಿಸಿದ್ದರು. ಆದರೆ ಶುಕ್ರವಾರದ ಆಟ ಮುಂದುವರಿಸಿದ ಮಾರ್ನಸ್ ಲಾಬುಷೇನ್ (64, 126ಎ, 4x9) ಅವರು ಹೆಡ್ ಜೊತೆಗೂಡಿ ಭಾರತದ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ನಾಲ್ಕನೇ ವಿಕೆಟ್‌ಗೆ ಉಪಯುಕ್ತ 65 ರನ್‌ಗಳನ್ನು ಸೇರಿಸಿದರು. ಇದೇ ಹಾದಿಯಲ್ಲಿ ಲಾಬುಷೇನ್ ರನ್‌ಬರದಿಂದ ಹೊರಬಂದರು.
ಆಮೇಲೆ ಹೆಡ್ ಅವರ ಆಟ ಕಳೆಗಟ್ಟಿತು. ಮೂರು ಜೊತೆಯಾಟಗಳ ಮೂಲಕ ಅವರು ತಂಡದ ಸ್ಥಿತಿಯನ್ನು ಬಲಪಡಿಸಿದರು. ಅಧಿಕಾರಯುತ ಹೊಡೆತಗಳನ್ನು ಪ್ರದರ್ಶಿಸಿ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಈ ಜೊತೆಯಾಟಗಳಲ್ಲಿ 142 ರನ್‌ಗಳು ಹರಿದುಬಂದವು. ಇದರಲ್ಲಿ ಅವರೊಬ್ಬರೇ 91 ಎಸೆತಗಳಿಂದ 108 ರನ್ ಸೂರೆ ಮಾಡಿದ್ದರು. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ಲಯಕ್ಕೆ ಬರಲು ಹೆಡ್ ಅವಕಾಶವನ್ನೇ ನೀಡಲಿಲ್ಲ.
30 ವರ್ಷ ವಯಸ್ಸಿನ ಹೆಡ್ ಉಳಿದವರಿಗೂ ಕರುಣೆ ತೋರಲಿಲ್ಲ. ಯಾರೂ ಅವರನ್ನು ಅಪಾಯಕ್ಕೆ ಒಡ್ಡುವಂತೆ ಕಾಣಲಿಲ್ಲ. ಹರ್ಷಿತ್ ರಾಣಾ ಸಾಧಾರಣ ಬೌಲರ್‌ನಂತೆ ಕಂಡರು. ಅವರೆದುರು ಬೂಮ್ರಾ ಕೊಂಚ ಪರಿಣಾಮಕಾರಿಯಾದಂತೆ ಕಂಡುಬಂದರು. ಸಿರಾಜ್ ಮುಖದಲ್ಲಿ ಹತಾಶೆಯ ಭಾವ ಕಂಡಿತು. ಆಗೊಮ್ಮೆ–ಈಗೊಮ್ಮೆ ಮಾತ್ರ ಅವರು ಅಪಾಯಕಾರಿಯಂತೆ ಕಂಡರು. ಕೊನೆಗೂ ಹೆಡ್ ಅವರನ್ನು ಲೊ ಫುಲ್‌ಟಾಸ್‌ನಲ್ಲಿ ಬೌಲ್ಡ್ ಮಾಡಿದಾಗ ಭಾರತದ ಬೌಲರ್ ಸ್ವಲ್ಪ ಅತಿಯೆನ್ನುವಂತೆ ವರ್ತಿಸಿದರು. ಇತರ ಆಟಗಾರರು ಅವರನ್ನು ಶಾಂತಗೊಳಿಸಿದರು.
ಹೊಸ ಚೆಂಡನ್ನು ಪಡೆದರೂ, ರನ್ ಹರಿವು ನಿಲ್ಲಲಿಲ್ಲ. ಬೂಮ್ರಾ ಒಂದೆಡೆ ನಿಯಂತ್ರಣ ಹೇರಿದರು. ಆಸ್ಟ್ರೇಲಿಯಾದ ಮುನ್ನಡೆ ಬೆಳೆಯಿತು. ಸಿರಾಜ್ ಮತ್ತು ಬೂಮ್ರಾ ಕೊನೆಯ ಕೆಲವು ಆಟಗಾರರು ನೆಲೆಯೂರದಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.