ಹುಬ್ಬಳ್ಳಿ ಟೈಗರ್ಸ್ ಪರ 99 ರನ್ ದಾಖಲಿಸಿದ ನಾಯಕ ದೇವದತ್ತ ಪಡಿಕ್ಕಲ್
ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರು: ಆಗಾಗ್ಗೆ ಸುರಿದ ಸೋನೆ ಮಳೆಯ ನಡುವೆಯೂ ಮಂಗಳೂರು ಡ್ರ್ಯಾಗನ್ಸ್ ಬೌಲರ್‌ಗಳ ಬೆವರಿಳಿಸಿದ ನಾಯಕ ದೇವದತ್ತ ಪಡಿಕ್ಕಲ್ ( 99 ರನ್ ಔಟಾಗದೇ, 64 ಎ, 4X10, 6X5 ) ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಫೈನಲ್ ತಲುಪಿಸಿದರು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಮಹಾರಾಜ ಟ್ರೋಫಿ’ ಟ್ವೆಂಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹುಬ್ಬಳ್ಳಿ 110 ರನ್ ಅಂತರದಿಂದ ಏಕಪಕ್ಷೀಯ ಗೆಲುವು ದಾಖಲಿಸಿತು. 2023ರಲ್ಲಿ ತಂಡವು ಮೊದಲ ಬಾರಿಗೆ ‘ಮಹಾರಾಜ ಟ್ರೋಫಿ’ ಎತ್ತಿ ಹಿಡಿದಿತ್ತು. ಇದೀಗ ಎರಡನೇ ಪ್ರಶಸ್ತಿಗೆ ಇನ್ನೊಂದು ಹೆಜ್ಜೆ ಬಾಕಿ ಇದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಡಿಕ್ಕಲ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಅಬ್ಬರದ ಆಟವಾಡಿದರು. ಮೊದಲ ವಿಕೆಟ್‌ಗೆ ಮೊಹಮ್ಮದ್ ತಾಹಾ (37) ಜೊತೆಗೂಡಿ 81 ರನ್ ಕಲೆಹಾಕಿದರು. ತಾಹಾ, ರೋನಿತ್ ಮೋರೆ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರದಲ್ಲಿ ಪಡಿಕ್ಕಲ್‌ಗೆ ಜೊತೆಯಾದ ಅಭಿನವ್ ಮನೋಹರ್ (50 ರನ್, 23ಎ, 4X5, 6X3) ತಂಡದ ರನ್ ವೇಗ ಹೆಚ್ಚಿಸಿದರು. ಈ ಜೋಡಿಯು ಕೇವಲ 48 ಎಸೆತದಲ್ಲಿ 105 ರನ್ ಬಾರಿಸಿತು.
13ನೇ ಓವರ್ ಅಂತ್ಯಕ್ಕೆ 100 ರನ್ ಗಡಿ ದಾಟಿದ ಹುಬ್ಬಳ್ಳಿ, ಕಡೆಯ 7 ಓವರ್‌ಗಳಲ್ಲಿ 110 ರನ್‌ಗಳ ಹೊಳೆ ಹರಿಸಿತು. ಪಡಿಕ್ಕಲ್ ಅವರು ಕೊನೆ ಓವರ್‌ನಲ್ಲಿ ಎರಡು ಸಿಂಗಲ್ಸ್ ಮಾತ್ರ ತೆಗೆದುಕೊಂಡು ಶತಕ ತಪ್ಪಿಸಿಕೊಂಡರು.
ಅಲ್ಪಮೊತ್ತಕ್ಕೆ ಕುಸಿತ: ದೊಡ್ಡ ಮೊತ್ತದ ಬೆನ್ನತ್ತಿದ ಮಂಗಳೂರು ಆರಂಭದಿಂದಲೇ ಪರದಾಡಿತು. ಇಂಪ್ಯಾಕ್ಟ್ ಆಟಗಾರನಾಗಿ ಇನ್ನಿಂಗ್ಸ್ ಆರಂಭಿಸಿದ ಬಿ.ಆರ್. ಶರತ್ (1) ಬಹುಬೇಗನೆ ವಿಕೆಟ್ ಒಪ್ಪಿಸಿದರು. ತಿಪ್ಪಾರೆಡ್ಡಿ (16), ಕೆ.ವಿ. ಅನೀಶ್ (28) ಹಾಗೂ ಆದರ್ಶ್ ಪ್ರಜ್ವಲ್ (17) ಹೊರತುಪಡಿಸಿ ಉಳಿದವರು ಒಂದಂಕಿ ಸ್ಕೋರ್ ದಾಟಲಿಲ್ಲ.
ಹುಬ್ಬಳ್ಳಿ ಪರ ಆಫ್ ಸಿನ್ನರ್ ರಿತೇಶ್ ಭಟ್ಕಳ್ 3 ವಿಕೆಟ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದರು. ಕೆ.ಸಿ. ಕಾರಿಯಪ್ಪ, ಯಶ್‌ರಾಜ್ ಪೂಂಜ ಹಾಗೂ ಶ್ರೀಶ ಆಚಾರ್ ತಲಾ 2 ವಿಕೆಟ್ ಪಡೆದರು. ಫೀಲ್ಡಿಂಗ್‌ನಲ್ಲೂ ಮಿಂಚಿದ ಪಡಿಕ್ಕಲ್ ನಾಲ್ಕು ಕ್ಯಾಚ್ ಹಿಡಿದರು.
ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ನೀಡಿರುವ ಪಡಿಕ್ಕಲ್ 439 ರನ್ ಮೂಲಕ ಅಗ್ರ ಸ್ಕೋರರ್ ಆಗಿದ್ದಾರೆ. ಮಂಗಳೂರು ವೇಗಿ ಕ್ರಾಂತಿಕುಮಾರ್ 25 ವಿಕೆಟ್ ಮೂಲಕ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಕ್ವಾಲಿಫೈಯರ್–1 ಪಂದ್ಯ ಕೈಚೆಲ್ಲಿದ ಮಂಗಳೂರು ಡ್ರ್ಯಾಗನ್ಸ್ ಬುಧವಾರ ಕ್ವಾಲಿಫೈಯರ್–2 ಪಂದ್ಯವನ್ನಾಡಲಿದೆ.
ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 210 ( ದೇವದತ್ತ ಪಡಿಕ್ಕಲ್ ಔಟಾಗದೇ 99, ಅಭಿನವ್ ಮನೋಹರ್ 50, ಮೊಹಮ್ಮದ್ ತಾಹಾ 37. ರೋನಿತ್ ಮೋರೆ 48ಕ್ಕೆ 1, ಕ್ರಾಂತಿಕುಮಾರ್ 49ಕ್ಕೆ 1) ಮಂಗಳೂರು ಡ್ರ್ಯಾಗನ್ಸ್: 16.1 ಓವರ್‌ಗಳಲ್ಲಿ 100 ( ರಿತೇಶ್ ಭಟ್ಕಳ್ 20ಕ್ಕೆ 3, ಕೆ.ಸಿ. ಕಾರಿಯಪ್ಪ 14ಕ್ಕೆ 2, ಯಶ್‌ರಾಜ್ ಪೂಂಜ 30ಕ್ಕೆ 2)
ಪಂದ್ಯದ ಆಟಗಾರ: ದೇವದತ್ತ ಪಡಿಕ್ಕಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.