ADVERTISEMENT

ಏಕದಿನ ಕ್ರಿಕೆಟ್‌ | ಎರಡು ಹೊಸಚೆಂಡಿನ ಬಳಕೆಯಲ್ಲಿ ಬದಲಾವಣೆ?: ಐಸಿಸಿ ಚಿಂತನೆ

ಪಿಟಿಐ
Published 12 ಏಪ್ರಿಲ್ 2025, 14:37 IST
Last Updated 12 ಏಪ್ರಿಲ್ 2025, 14:37 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ನವದೆಹಲಿ: ಏಕದಿನ ಕ್ರಿಕೆಟ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ ಎಂಬ ದೀರ್ಘಕಾಲದ ಕಳವಳಕ್ಕೆ ಪರಿಹಾರ ಕಂಡುಕೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮುಂದಾಗಿದೆ. ಏಕದಿನ ಪಂದ್ಯದಲ್ಲಿ ಪ್ರಸ್ತುತ ಇರುವ ಎರಡು ಹೊಸ ಚೆಂಡುಗಳ ಬಳಕೆಯಲ್ಲಿ ಬದಲಾವಣೆ ತರುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನೇತೃತ್ವದ ಐಸಿಸಿ ಕ್ರಿಕೆಟ್‌ ಸಮಿತಿಯು ಏಕದಿನ ಪಂದ್ಯದಲ್ಲಿ ಒಂದೇ ಚೆಂಡಿನ ಬಳಕೆಗೆ ಶಿಫಾರಸು ಮಾಡಿದೆ. ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ  ಎರಡು ಹೊಸ ಚೆಂಡುಗಳ ಬಳಕೆ ದಶಕಕ್ಕೂ ಹೆಚ್ಚು ಸಮಯದಿಂದ ಚಾಲ್ತಿಯಲ್ಲಿದೆ.

ಈ ಶಿಫಾರಸನ್ನು ಐಸಿಸಿ ನಿರ್ದೇಶಕರ ಮಂಡಳಿ ಸ್ಥಿರೀಕರಿಸಬೇಕಾಗಿದೆ. ನಂತರವಷ್ಟೇ ಆಟದ ಪರಿಷ್ಕೃತ ನಿಯಮಗಳಲ್ಲಿ ಇದರ ಸೇರ್ಪಡೆಯಾಗಲಿದೆ. ಐಸಿಸಿ ಮಂಡಳಿಯು ಹರಾರೆಯಲ್ಲಿ (ಜಿಂಬಾಬ್ವೆ) ಈ ವಿಷಯದ ಮೇಲೆ ಭಾನುವಾರ ಚರ್ಚೆ ನಡೆಸಲಿದೆ.

ADVERTISEMENT

ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಎರಡು ಎಂಡ್‌ಗಳಿಂದ ಬೌಲಿಂಗ್‌ ಮಾಡುವ ಬೌಲರ್‌ಗಳು ಪ್ರತ್ಯೇಕ ಹೊಸ ಚೆಂಡನ್ನು ಬಳಸುತ್ತಿದ್ದಾರೆ. ಚೆಂಡು ತನ್ನ ಹೊಳಪು ಉಳಿಸಿಕೊಂಡು ಬ್ಯಾಟರ್‌ಗಳಿಗೆ ಸರಾಗವಾಗಿ ರನ್‌ ಗಳಿಸಲು ಅನುಕೂಲವಾಗುತ್ತದೆ. ಕ್ಷೇತ್ರರಕ್ಷಣೆ ಮಿತಿಯೂ ಇರುವುದರಿಂದ ಬ್ಯಾಟರ್‌ಗಳಿಗೆ ಚೆಂಡನ್ನು ಹೊಡೆದಟ್ಟಲು ಹೆಚ್ಚು ಅವಕಾಶವಾಗುತ್ತದೆ.

ವೇಗದ ಬೌಲರ್‌ಗಳಿಗೆ ರಿವರ್ಸ್‌ ಸ್ವಿಂಗ್ ಮಾಡಲೂ ಕಷ್ಟವಾಗುತ್ತದೆ. ರಿವರ್ಸ್ ಸ್ವಿಂಗ್ ಪಡೆಯಲು ಚೆಂಡು ಕಡೇಪಕ್ಷ 35 ಓವರುಗಳಾಷ್ಟದರೂ ಹಳೆಯದಾಗಿರಬೇಕಾಗುತ್ತದೆ. ಹೊಸ ಚೆಂಡಿನಲ್ಲಿ ತಿರುವು ಪಡೆಯಲು ಕಷ್ಟವಾಗುತ್ತದೆ.

‌‘ಐಸಿಸಿ ಕ್ರಿಕೆಟ್‌ ಸಮಿತಿಯು ಮೂರು ನಿಯಮಗಳ ಬದಲಾವಣೆಗೆ ಶಿಫಾರಸು ಮಾಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಹೊಸ ಚೆಂಡು, ಟೆಸ್ಟ್‌ ಪಂದ್ಯಗಳಲ್ಲೂ ಓವರುಗಳ ವೇಗ ಪರಿಶೀಲನೆಗೆ ಕ್ಲಾಕ್‌ ಟೈಮರ್‌ ಬಳಕೆ, 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ಅನ್ನು ಟಿ20ಗೆ ಬದಲಾಯಿಸುವುದು ಈ ಮೂರು ನಿಯಮಗಳಾಗಿವೆ’ ಎಂದು ಐಸಿಸಿ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದರು.

ಟೆಸ್ಟ್‌ ಪಂದ್ಯದಲ್ಲಿ ಓವರುಗಳ ಮಧ್ಯೆ ಬಿಡುವಿನ ಅವಧಿಯನ್ನು ಒಂದು ನಿಮಿಷಕ್ಕೆ ಸೀಮಿತಗೊಳಿಸಲು  ಟೈಮರ್‌ ಬಳಕೆ ಶಿಫಾರಸು ಮಾಡಲಾಗಿದೆ. ಇದರಿಂದ ನಿಗದಿ ಅವಧಿಯೊಳಗೆ 90 ಓವರುಗಳನ್ನು ಮುಗಿಸಲು ಸಾಧ್ಯವಾಗಲಿದೆ ಎನ್ನುವುದು ಇದರ ಹಿಂದಿನ ಉದ್ದೇಶ.

ಅಂಡರ್–19 ವಿಶ್ವಕಪ್‌ ಮಾದರಿ ಬದಲು?

19 ವರ್ಷದೊಳಗಿನವರ ವಿಶ್ವಕಪ್‌ ಅನ್ನು ಇದುವರೆಗೆ ಚಾಲ್ತಿಯಲ್ಲಿರುವ 50 ಓವರುಗಳ ಮಾದರಿ ಬದಲು ಟಿ20 ಮಾದರಿಯಲ್ಲಿ ನಡೆಸಲು ಐಸಿಸಿ ಯೋಚಿಸುತ್ತಿದೆ. 50 ಓವರುಗಳ ದ್ವಿಪಕ್ಷೀಯ ಸರಣಿ ಐಸಿಸಿ ಟೂರ್ನಿಗಳಲ್ಲಿ ಬಿಟ್ಟರೆ ಉಳಿದಂತೆ ತನ್ನ ಆಕರ್ಷಣೆ ಕಳೆದುಕೊಂಡಿದೆ.

ಈ ವಯೋವರ್ಗದಲ್ಲಿ 20 ಓವರುಗಳ ಮಾದರಿಯ ವಿಶ್ವಕಪ್‌ ನಡೆಸುವುದರಿಂದ ಫ್ರಾಂಚೈಸಿ ಲೀಗ್ ನಡೆಸುವ ದೇಶಗಳಲ್ಲಿ ಹೆಚ್ಚಿನ ಪ್ರತಿಭೆಗಳನ್ನು ಕಂಡುಕೊಳ್ಳಲು ಅವಕಾಶವಾಗಲಿದೆ ಎನ್ನುವುದು ಐಸಿಸಿಯ ಈ ಚಿಂತನೆಗೆ ಕಾರಣವಾಗಿದೆ.

ಮುಂದಿನ 19 ವರ್ಷದೊಳಗಿನವರ ವಿಶ್ವಕಪ್‌ ಜಿಂಬಾಬ್ವೆಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.