ADVERTISEMENT

ICC ಏಕದಿನ ರ‍್ಯಾಂಕಿಂಗ್:ಅಗ್ರ ಐದರಲ್ಲಿ ಕಾಣಿಸಿಕೊಂಡ ಭಾರತದ ಸ್ಟಾರ್ ಬ್ಯಾಟರ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2025, 10:11 IST
Last Updated 3 ಡಿಸೆಂಬರ್ 2025, 10:11 IST
   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ನ ಅಗ್ರ ಐದು ಸ್ಥಾನಗಳಲ್ಲಿ ಭಾರತದ ಮೂವರು ಬ್ಯಾಟರ್‌ಗಳು ಕಾಣಿಸಿಕೊಂಡಿದ್ದಾರೆ.

ಭಾರತದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಅವರು 783 ಪಾಯಿಂಟ್‌ನೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್‌ ಕೊಹ್ಲಿ ಅವರು 751 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ADVERTISEMENT

ಗಾಯಾಳುವಾಗಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿರುವ ಶುಭಮನ್‌ ಗಿಲ್‌ ಒಂದು ಸ್ಥಾನ ಕುಸಿತ ಕಂಡಿದ್ದು, 5ನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್‌ ಐಯ್ಯರ್‌ 9ನೇ ಸ್ಥಾನ ಹಾಗೂ ಕೆ.ಎಲ್‌ ರಾಹುಲ್‌ 14ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‌ ಬ್ಯಾಟರ್‌ ಡ್ಯಾರಿಲ್ ಮಿಚೆಲ್ (766) ಹಾಗೂ ಅಫ್ಗಾನಿಸ್ತಾನದ ಇಬ್ರಾಹಿಂ ಜರ್ದಾನ್‌ (764) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

6ನೇ ಸ್ಥಾನದಲ್ಲಿ ಕುಲದೀಪ್‌: ಭಾರತ ತಂಡದ ಪ್ರಮುಖ ಬೌಲರ್‌ ಕುಲದೀಪ್‌ ಯಾದವ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್‌ ಪಡೆದ ನಂತರ ಏಕದಿನ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು, 6ನೇ ಸ್ಥಾನಕ್ಕೇರಿದ್ದಾರೆ.

ರವೀಂದ್ರ ಜಡೇಜ ಅವರು 588 ಪಾಯಿಂಟ್‌ಗಳೊಂದಿಗೆ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.