ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ
–ರಾಯಿಟರ್ಸ್ ಚಿತ್ರ
ದುಬೈ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಹಿಂದೆ ಹಾಕಿ ಆರನೇ ಸ್ಥಾನಕ್ಕೆ ಏರಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಪಂತ್, ಎರಡನೇ ಇನಿಂಗ್ಸ್‌ನಲ್ಲಿ ಆಕ್ರಮಣಕಾರಿ ಆಟವಾಡಿ 99 ರನ್ ಹೊಡೆದಿದ್ದರು. ಅವರು ಮೂರು ಸ್ಥಾನ ಬಡ್ತಿ ಪಡೆದಿದ್ದಾರೆ. ಆ ಪಂದ್ಯದಲ್ಲಿ 70 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಒಂದು ಸ್ಥಾನ ಹಿಂಬಡ್ತಿ ಪಡೆದು ಎಂಟನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನ ಕಾಯ್ದುಕೊಂಡಿರುವ ಯಶಸ್ವಿ ಜೈಸ್ವಾಲ್ ಭಾರತದ ಆಟಗಾರರಲ್ಲಿ ಮುಂಚೂಣಿಯಲ್ಲಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಶ್ರಿಲಂಕಾದ 15ನೇ ದಿಮುತ್ ಕರುಣಾರತ್ನೆ ಜೊತೆ 15ನೇ ಸ್ಥಾನ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್‌ನ ಪ್ರಮುಖ ಬ್ಯಾಟರ್ ಜೊ ರೂಟ್ ಅವರು ಅಗ್ರಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ರಚಿನ್ ರವೀಂದ್ರ 36 ಸ್ಥಾನ ಮೇಲೇರಿ 18ನೇ ಸ್ಥಾನದಲ್ಲಿ ನೆಲಸಿದ್ದಾರೆ.
ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಮ್ಯಾಟ್ ಹೆನ್ರಿ ಕ್ರಮಾಂಕದಲ್ಲಿ ಜೀವನ ಶ್ರೇಷ್ಠ ಸಾಧನೆ ತೋರಿದ್ದು, ಎರಡು ಸ್ಥಾನ ಬಡ್ತಿಯೊಡನೆ 9ನೇ ಸ್ಥಾನಕ್ಕೇರಿದ್ದಾರೆ. ಬೆಂಗಳೂರು ಟೆಸ್ಟ್‌ನಲ್ಲಿ ಅವರು 8 ವಿಕೆಟ್ ಕಬಳಿಸಿದ್ದರು. ಆ ಪಂದ್ಯದಲ್ಲಿ 7 ವಿಕೆಟ್ ಪಡೆದಿದ್ದ ವಿಲ್ ಓ ರೂರ್ಕಿ 39ನೇ ಸ್ಥಾನಕ್ಕೇರಿದ್ದಾರೆ.
ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಸ್ಪಿನ್ ತಾರೆ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜ ಏಳನೇ ಕಾಪಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.