ADVERTISEMENT

ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿಕೊಂಡ ಅನಿಲ್ ಚೌಧರಿ!

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 16:55 IST
Last Updated 14 ಜುಲೈ 2020, 16:55 IST
ಅನಿಲ್ ಚೌಧರಿ
ಅನಿಲ್ ಚೌಧರಿ   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಅನಿಲ್ ಚೌಧರಿ. ಎರಡೂವರೆ ತಿಂಗಳುಗಳ ಹಿಂದೆ ತಮ್ಮ ಗ್ರಾಮದಲ್ಲಿ ತಮ್ಮ ಮೊಬೈಲ್‌ಗೆ ಇಂಟರ್‌ನೆಟ್‌ ಸಂಪರ್ಕ ಪಡೆಯಲು ಮರ ಹತ್ತಿ ಕುಳಿತು ಸುದ್ದಿಯಾಗಿದ್ದರು.

ಇದೀಗ ಅದೇ ಸುದ್ದಿಯಿಂದಾಗಿ ಅವರ ಗ್ರಾಮಕ್ಕೆ ಉತ್ತಮವಾದ ಇಂಟರ್‌ನೆಟ್ ಸಂಪರ್ಕ ಲಭಿಸಿದೆ. ಮಾರ್ಚ್‌ನಲ್ಲಿ ಕೊರೊನಾ ವೈರಸ್‌ ಪ್ರಸರಣ ತಡೆಯಲು ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿತ್ತು. ಆಗ ದಕ್ಷಿಣ ಆಫ್ರಿಕಾ ಎದುರಿನ ಸರಣಿಯೂ ರದ್ದಾಗಿತ್ತು. ಅದರಲ್ಲ ಅಂಪೈರ್ ಆಗಿದ್ದ ಚೌಧರಿ ತಮ್ಮ ಪುತ್ರರೊಂದಿಗೆ ಸ್ವಗ್ರಾಮ ಡಂಗ್ರೋಲ್‌ಗೆ (ಉತ್ತರಪ್ರದೇಶ) ತೆರಳಿದ್ದರು. ನವದೆಹಲಿಯಿಂದ ಕೇವಲ 80 ಕಿ.ಮೀ ದೂರ ಇರುವ ಈ ಗ್ರಾಮದಲ್ಲಿ ಇಂಟರ್‌ನೆಟ್‌ ಸಿಗುವುದು ಕಷ್ಟಸಾಧ್ಯವಾಗಿತ್ತು.

ಇದೇ ಸಂದರ್ಭದಲ್ಲಿ ಐಸಿಸಿಯು ಅಂಪೈರ್‌ಗಳಿಗಾಗಿ ಏರ್ಪಡಿಸುತ್ತಿದ್ದ ಆನ್‌ಲೈನ್‌ ತರಗತಿ ಮತ್ತು ಸಂವಾದಗಳಲ್ಲಿ ಭಾಗವಹಿಸಲು ಅನಿಲ್ ಪರದಾಡಿದ್ದರು. ಅದಕ್ಕಾಗಿ ತಮ್ಮ ಮನೆಯ ಸಮೀಪದ ಮರ, ಕಂಬ ಮತ್ತು ಮಾಳಿಗೆಯ ಮೇಲೆ ಹತ್ತಿ ಸಂಪರ್ಕ ಪಡೆಯಲು ಯತ್ನಿಸಿದ್ದರು ಎಂದು ವರದಿಯಾಗಿತ್ತು. ಆ ಹಳ್ಳಿಯ ಜನರೂ ಇಂಟರ್‌ನೆಟ್‌ಗಾಗಿ ಮರ ಏರಿ ಕುಳಿತುಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು.

ADVERTISEMENT

ಆದರೆ ಅನಿಲ್ ಅವರಿಂದಾಗಿ ಹೊರಜಗತ್ತಿಗೆ ಈ ಸುದ್ದಿ ತಿಳಿಯಿತು. ನಂತರ ಟೆಲಿಕಾಮ್ ಕಂಪೆನಿಯೊಂದು ಗ್ರಾಮದಲ್ಲಿ ನೆಟ್‌ವರ್ಕ್‌ ಸ್ಥಂಭವನ್ನು ಅಳವಡಿಸಿದೆ.

’ಈಗ ಮೊದಲಿನಂತೆ ಐಸಿಸಿ, ಬಿಸಿಸಿಐ ವಿಡಿಯೊ ಕಾನ್ಫರೆನ್ಸ್‌ಗಳಿದ್ದಾಗ ಡಂಗ್ರೋಲ್ ನಿಂದ ದೆಹಲಿಗೆ ಹೋಗಬೇಕಾಗುತ್ತಿತ್ತು. ನಮ್ಮ ಹಳ್ಳಿಯ ಮನೆಯಿಂದಲೇ ಈಗ ಆ ಸಂವಾದಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ಈ ಊರಿನ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಿದೆ. ಅವರಿಗೂ ಆನ್‌ಲೈನ್‌ ತರಗತಿಗಳ ಲಾಭ ಪಡೆಯಲು ಸಾಧ್ಯವಾಗಿದೆ. ಗ್ರಾಮಸ್ಥರಿಗೂ ಫೋನ್ ಬಳಕೆ ಸುಲಭವಾಗಿದೆ. ಇದು ನನ್ನ ಮನಸ್ಸಿಗೆ ಬಹಳ ಖುಷಿ ಕೊಟ್ಟಿದೆ‘ ಎಂದು ಅನಿಲ್ ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.