ADVERTISEMENT

ಚೆಂಡಿನ ಹೊಳಪಿಗೆ ಎಂಜಲು ಬದಲು ಮತ್ತೇನು? ಐಸಿಸಿ ಚಿಂತನೆ

ಸ್ವಿಂಗ್ ಆಗುವುದಕ್ಕಾಗಿ ಎಂಜಲು ಬದಲು ಮತ್ತೇನಾದರೂ ಬಳಸುವ ಅನುಮತಿ ನೀಡಲು ಐಸಿಸಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 2:16 IST
Last Updated 25 ಏಪ್ರಿಲ್ 2020, 2:16 IST
   

ನವದೆಹಲಿ: ಚೆಂಡಿನ ಹೊಳಪಿಗಾಗಿ ನಿರ್ದಿಷ್ಟ ಪದಾರ್ಥವನ್ನು ಬಳಸುವ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಶಾಸನ ರೂಪಿಸುವ ಸಾಧ್ಯತೆ ಇದ್ದು ಕೋವಿಡ್ ಮಹಾಮಾರಿಯ ಆತಂಕ ಮುಗಿದ ನಂತರ ನಡೆಯುವ‍ಪಂದ್ಯಗಳ ಸಂದರ್ಭದಲ್ಲಿ ಇದು ಜಾರಿಗೆ ಬರಲಿದೆ. ಹೀಗಾಗಿ ಬೌಲರ್‌ಗಳು ಚೆಂಡಿಗೆ ಎಂಜಲು ತಾಗಿಸುವುದನ್ನು ಇನ್ನು ನಿಲ್ಲಿಸಬೇಕಾಗುತ್ತದೆ.

ನಿಗದಿಪಡಿಸಿದ ಯಾವುದಾದರೂ ಪದಾರ್ಥವನ್ನು ಅಂಪೈರ್‌ಗಳ ಅನುಮತಿಯೊಂದಿಗೆ ಚೆಂಡಿಗೆ ತಾಗಿಸಲು ಅವಕಾಶ ನೀಡುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಡಳಿತಾಧಿಕಾರಿಗಳು ಚೆಂಡು ವಿರೂಪಗೊಳಿಸುವುದಕ್ಕೆ ಸಂಬಂಧಿಸಿ ಈಗ ಇರುವ ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಕ್ರಿಕೆಟ್ ವೆಬ್‌ಸೈಟ್ ಇಎಸ್‌ಪಿಎನ್‌ ವರದಿ ಮಾಡಿದೆ.

ಒಂದು ಬದಿಯ ಹೊಳಪು ಹೆಚ್ಚಿಸಿಚೆಂಡನ್ನು ಸ್ವಿಂಗ್ ಮಾಡಲು ಬೌಲರ್‌ಗಳು ಎಂಜಲು ಸವರುವುದು ಸಾಮಾನ್ಯ. ಆದರೆ ಕೋವಿಡ್‌ನಂಥ ಸೋಂಕು ಹರಡಲು ಇದು ಕಾರಣವಾಗಬಹುದು ಎಂದು ಐಸಿಸಿ ವೈದ್ಯಕೀಯ ಸಮಿತಿ ಈಚೆಗೆ ಎಚ್ಚರಿಕೆ ನೀಡಿತ್ತು. ಕೋವಿಡ್‌ನಿಂದಾಗಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಹೇರಲಾಗಿರುವ ಲಾಕ್‌ಡೌನ್ ಸಡಿಲಗೊಂಡು ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ ಎಂಜಲು ತಾಗಿಸುವುದನ್ನು ನಿಲ್ಲಿಸಲು ಐಸಿಸಿ ಕ್ರಮ ಕೈಗೊಳ್ಳಲಿದೆ. ಆದರೆ ಚೆಂಡಿಗೆ ಯಾವುದಾದರೂ ಪದಾರ್ಥವನ್ನು ಹಚ್ಚಲು ಅನುಮತಿ ನೀಡಿದರೆ ಚೆಂಡು ವಿರೂಪಗೊಳಿಸಲು ಅವಕಾಶ ನೀಡಿದಂತಾಗುತ್ತದೆ ಎಂಬ ಆತಂಕವೂ ಕಾಡತೊಡಗಿದೆ.

ADVERTISEMENT

2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಪಂದ್ಯದಲ್ಲಿ ಸ್ಯಾಂಡ್ ಪೇಪರ್ ಬಳಸಿಆಸ್ಟ್ರೇಲಿಯಾದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಚೆಂಡು ವಿರೂಪಗೊಳಿಸಿದ್ದರು. ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಸ್ಟೀವ್ ಸ್ಮಿತ್ ಡೇವಿಡ್ ವಾರ್ನರ್ ಮೇಲೆ ತಲಾ ಒಂದು ವರ್ಷದ ನಿಷೇಧ ಹೇರಲಾಗಿತ್ತು.

‘ಚೆಂಡಿನ ಹೊಳಪಿಗಾಗಿ ಪದಾರ್ಥ ಬಳಸಲು ಅನುಮತಿ ನೀಡುವುದಕ್ಕೆ ಸಂಬಂಧಿಸಿ ರೂಪಿಸುವ ನಿಯಮದ ರೂಪುರೇಷೆ ಸಿದ್ಧಗೊಳಿಸುವುದು ಈಗ ನಮ್ಮ ಮುಂದೆ ಇರುವ ಪ್ರಮುಕ ಕೆಲಸ. ಬೌಲರ್‌ನ ಸೌಲಭ್ಯದಿಂದ ಹಿಡಿದು ಸರ್ಕಾರದ ಅನುಮತಿ ಪಡೆಯುವುದರ ವರೆಗಿನ ವಿಷಯಗಳನ್ನು ಚರ್ಚಿಸಬೇಕಾಗಿದೆ’ ಎಂದು ಐಸಿಸಿ ವೈದ್ಯಕೀಯ ಸಮಿತಿಯ ಮುಖ್ಯಸ್ಥ ಪೀಟರ್ ಹಾರ್ಕಾರ್ಟ್ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡನ್ನು ಸ್ವಿಂಗ್ ಮಾಡಲು ಅವಕಾಶವಿಲ್ಲದಿದ್ದರೆ ಬೌಲರ್‌ಗಳು ತುಂಬ ಪ್ರಯಾಸಪಡಬೇಕಾದೀತು ಎಂದು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಇಚೆಗೆ ಹೇಳಿದ್ದರು. ಚೆಂಡಿಗೆ ಎಂಜಲು ಸವರುವುದನ್ನು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.