ADVERTISEMENT

ಕ್ರಿಕೆಟ್ ಬೆಸೆಯಲು ಹಾಡು

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:47 IST
Last Updated 29 ಮೇ 2019, 19:47 IST
ರುಡಿಮೆಂಟಲ್‌ ಬ್ಯಾಂಡ್‌ನೊಂದಿಗೆ ಲೊರಿನ್
ರುಡಿಮೆಂಟಲ್‌ ಬ್ಯಾಂಡ್‌ನೊಂದಿಗೆ ಲೊರಿನ್   

ಬೆಂಗಳೂರು: ಈ ರಾತ್ರಿಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ.. ನಾನು ಒಬ್ಬಂಟಿ ಅಲ್ಲ.. ಹೌದು ನಾನು ಸುಮ್ಮನೆ ನಿಲ್ಲುವುದಿಲ್ಲ, ಜೊತೆಯಾಗುತ್ತೇನೆ..

ತಮ್ಮ ಈ ಸರಳ ಸಾಲುಗಳಿಗೆ ರುಡಿಮೆಂಟಲ್ ಬ್ಯಾಂಡ್‌ನೊಂದಿಗೆ ಮಾಧುರ್ಯದ ಕಿಡಿ ಹಚ್ಚಿದ್ದಾರೆ ಬ್ರಿಟನ್‌ ಹಾಡುಗಾರ್ತಿ ಲೊರಿನ್.

ಯಾವುದೇ ಕಲೆ, ಕ್ರೀಡೆ ಪ್ರೀತಿಸುವವರಿಗೆ ಹಾಡು ಕೇವಲ ಹಾಡಲ್ಲ. ಕ್ರಿಕೆಟ್; ಕ್ರಿಕೆಟ್ ಮಾತ್ರವೇ ಅಲ್ಲ. ಅದರೊಳಗೆ ಕೋಟ್ಯಾಂತರ ಕಣ್ಣುಗಳಿವೆ, ಪ್ರೀತಿಯ ಹೃದಯಗಳಿವೆ, ನಿರೀಕ್ಷೆಯ ಚಿಗುರುಗಳಿವೆ ಎಂಬುದು ಹಾಡುಗಾರ್ತಿಯ ಅನಿಸಿಕೆ. ನಾವ್ಯಾರೂ ಒಂಟಿ ಅಲ್ಲ, ಹಾಗೆಂದು ತಿಳಿಯದೇ ನಿಲ್ಲಬೇಕಿಲ್ಲ.

ADVERTISEMENT

ಜೊತೆಯಾಗಿ ಸಾಗಬೇಕು. ಸಾಧನೆಯೊಂದರ ಹೆಗಲಿಗೆ ಹೆಗಲಾಗಬೇಕು ಎನ್ನುವ ಈ ಹಾಡಿನ ಸಾಲುಗಳು ಕಾಡುತ್ತವೆ.

ಹಾಡನ್ನು ದೃಶ್ಯದಲ್ಲಿ ಕಟ್ಟಿರುವ ನಿರ್ದೇಶಕ ಡಾನ್‌ ಹೆನ್‌ಶಾ. ಲಂಡನ್‌ ಜನರ ಚಿತ್ರಕಾವ್ಯವನ್ನು ಬರೆದಿದ್ದಾರೆ. ಇಲ್ಲಿನ ಎಲ್ಲ ದೇಶಗಳ ಎಲ್ಲ ಜನರ ಸಂಸ್ಕೃತಿಯನ್ನು ಬಿತ್ತರಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಹಾಡು ಶುರುವಾಗುವುದೇ ಚೆಂಡು ಕಳೆದುಕೊಂಡ ಬಾಲಕನಿಂದ.

ಸಮುದ್ರ ದಂಡೆಯಲ್ಲಿ ಬಾನಗಲದ ಖುಷಿಯೊಂದಿಗೆ ತನ್ನ ಗೆಳೆಯರೊಂದಿಗೆ ಆಡುವ ಕೆರಿಬಿಯನ್ ಬಾಲಕನ ಕ್ರಿಕೆಟ್ ಬ್ಯಾಟ್‌ನಿಂದ ಹೊಮ್ಮಿದ ಚೆಂಡು ಸಮುದ್ರ ಪಾಲಾಗುತ್ತದೆ.

ಅದು ಹುಡುಗನ ಕಣ್ಗಡಲಲ್ಲಿ ತೇಲುತ್ತದೆ. ಅದೇ ಚೆಂಡು ಬಾಂಗ್ಲಾದೇಶದ ಕ್ಷೌರದಂಗಡಿಯವನ ಕನ್ನಡಿಯ ಎದುರು ಪ್ರತ್ಯಕ್ಷವಾಗುತ್ತದೆ. ಅಲ್ಲಿ ಪಾಕಿಸ್ತಾನಿಯರೂ, ಭಾರತೀಯರೂ ಮತ್ತು ಶ್ರೀಲಂಕನ್ನರು ಟಿ.ವಿಯಲ್ಲಿ ಕ್ರಿಕೆಟ್‌ ನೋಡುತ್ತಿರುತ್ತಾರೆ. ಇಲ್ಲಿ ಕಾಣುವುದು ಉಪಖಂಡದಲ್ಲಿರುವ ಜಿದ್ದಾಜಿದ್ದಿಯನ್ನಲ್ಲ, ಪ್ರೀತಿ.

ಅಂಗಡಿಯಲ್ಲಿದ್ದ ಚೆಂಡನ್ನು ಇಂಗ್ಲೆಂಡ್ ಬಾಲಕ ತೆಗೆದುಕೊಳ್ಳುತ್ತಾನೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದ ಮಕ್ಕಳ ಕೈಗಳನ್ನು ತಲುಪುತ್ತದೆ. ಅದು ಮಕ್ಕಳಿಂದ ದೊಡ್ಡವರಿಗೆ ಸಾಗುತ್ತಾ ಹೋಗುತ್ತದೆ. ಹೀಗೆ ಭೂಮಿಯ ಎಲ್ಲ ಜೀವಗಳನ್ನು ಒಂದು ಮಾಡುವ ಮಾಯಾ ಚೆಂಡಾಗುತ್ತದೆ.

‘ನಾನು ಹೊರಡುವ ಮುಂಚೆ ನನ್ನನ್ನು ಕರೆದುಬಿಡು.. ನನ್ನ ಬಳಿ ತುಂಬ ಆಯ್ಕೆಗಳಿವೆ. ಯೋಚಿಸದ್ದನೇ ಯೋಜಿಸಬೇಡ. ಒಳ್ಳೆಯದನ್ನೇ ಬಯಸುವವರು ನಾವು., ನಾನು ಹೋಗುವ ಮುಂಚೆ ಹೇಳು. ಕರೆಯುತ್ತಿಯಾ ತಾನೇ...’ ಹೀಗೆಂದು ಕೇಳಿಕೊಳ್ಳುವ ಹಾಡು, ನಾನು ದಾಟಿ ಹೋಗುತ್ತಿದ್ದೇನೆ.. ನನಗೀಗ ಗೊತ್ತಾಗಬೇಕು, ನಾವು ಜತೆಯಲ್ಲಿ ಹೋಗುತ್ತಿದ್ದೇವೆ ತಾನೇ..? ಎಂದು ನಮ್ಮ ಒಗ್ಗಟ್ಟನ್ನು ಕೇಳುತ್ತದೆ. ಈ ಮೂಲಕ ನಾವೆಲ್ಲರೂ ಒಂದು. ನಮ್ಮ ಸಾಧ್ಯತೆಯ ಗೆರೆಯನ್ನು ಉಲ್ಲಂಘಿಸಲು, ಸೀಮಾತೀತರಾಗಲೂ ಜೊತೆಯಾಗಿ ಸಾಗಬೇಕು ಎಂಬುದನ್ನು ಹಾಡು ಸಾರುತ್ತದೆ.

ಹಾಡಿನ ಪ್ರತಿ ದೃಶ್ಯಗಳು ನಮ್ಮನ್ನು ಕಾಡದೇ ಇರಲಾರವು. ಸೈಕಲ್ ಓಡಿಸುವ ಪಾಕಿಸ್ತಾನ, ಭಾರತ ಮತ್ತು ಇಂಗ್ಲೆಂಡ್ ಬಾಲಕಿಯರ ಕಣ್ಣುಗಳಲ್ಲಿ ತಮ್ಮ ಹಳೆಯ ದಾಖಲೆಯನ್ನು ಮುರಿಯುವ ಮಿಂಚು ಕಾಣುತ್ತದೆ. ವೇಗದಲ್ಲಿ ಓಡಿಸುವಾಗ ಅವರ ನಗು ಸಹ ಜೊತೆಗೇ ಸಾಗಿ, ಗೆಲ್ಲುವ ಗುರಿಯ ಕಡೆ ಓಡುತ್ತದೆ. ನಗೆಯನ್ನು-ಉತ್ಸಾಹವನ್ನು ಒಮ್ಮೆಲೆ ಅವರಲ್ಲಿ ನಾವು ಕಾಣುತ್ತೇವೆ. ಕಾರಿನ ಡಿಕ್ಕಿಯಲ್ಲಿ ಅಡಗುವ ಚೆಂಡು ಕೊನೆಗೆ ಹಾಡುಗಾರ್ತಿಗೂ ಸಿಗುತ್ತದೆ.

ಚೆಂಡು ಹಾಡಾಗುತ್ತದೆ. ಕುಣಿಸುತ್ತದೆ. ಕ್ರಿಕೆಟ್ ವಿಶ್ವಕಪ್ ಟ್ರೋಫಿಯಲ್ಲೂ ಚೆಂಡು ಇದೆ. ಅದು ನಮ್ಮೆಲ್ಲರನು ಒಂದು ಮಾಡಿದೆ ಎಂದು ಸಾರುವಂತಿದೆ.

ಒಟ್ಟಿನಲ್ಲಿ ಈ ಹಾಡಿಗೆ ಹಲವು ಯಶಸ್ವಿ ಕ್ರೀಡೆಗಳ ಥೀಮ್ ಹಾಡುಗಳಂತೆ ದೇಶಕಾಲ ಮೀರುವ ಗುಣವಿದೆ. ಇಂತಹದ್ದನ್ನು ಲೊರಿನ್ ಅವರು ‘ಸ್ಟ್ಯಾಂಡ್ ಬೈ’ ಮೂಲಕ ಸಾಧ್ಯವಾಗಿಸಿದ್ದಾರೆ.

ಲಂಡನ್ ಲೋಕ

ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯ ನಿರ್ಮಿಸಿತ್ತು ಬ್ರಿಟನ್. ಅಂತೆಯೇ ಕ್ರಿಕೆಟ್ ಲೋಕವನ್ನೂ ಕಟ್ಟಿದೆ. ಲೊರಿನ್ ಅವರ ಹಾಡು ಲಂಡನ್ ಲೋಕ ನಿರ್ಮಿಸಿಕೊಡುತ್ತದೆ. ಲಂಡನ್ ನಲ್ಲಿ ಎಲ್ಲ ದೇಶಗಳ ಅಭಿಮಾನಿಗಳೂ ಇದ್ದಾರೆ. ಎರಡು ಶತಮಾನಗಳಿಂದ ವಿವಿಧ ದೇಶಗಳ ಜನರು ಇಲ್ಲಿಯೇ ನೆಲೆಯೂರಿದ್ದಾರೆ.

ಇಲ್ಲಿ ಆಡಲು ಬರುವ ದಕ್ಷಿಣಾ ಏಷ್ಯಾ, ಆಸ್ಟೇಲಿಯಾ, ಆಫ್ರಿಕಾ, ಕೆರಿಬಿಯನ್ ದೇಶಗಳ ತಂಡಗಳನ್ನು ಬೆಂಬಲಿಸಲು ಈ ಲಂಡನ್ ಜನರಿಗೆ ಗೋಡೆ ಎಂಬುದಿಲ್ಲ. ಪ್ರೀತಿಯೇ ಇವರ ಜಗತ್ತು. ಪ್ರೀತಿಯ ಚೆಂಡನ್ನೂ ಎಲ್ಲರೆಡೆಗೆ ಎಸೆಯುವ ಸಹಿಷ್ಣುತೆ ನಮ್ಮಲ್ಲೂ ಇದೆ ಎಂದು ಈ ಹಾಡಿನಲ್ಲಿ ಸಾರಿದ್ದಾರೆ. ಇದನ್ನು ನೋಡುವಾಗ ಕಾಸ್ಮೊಪಾಲಿಟನ್ ಜಗದ ಒಲವಿನ ಬೆರಗು ಇದೆ ಎಂದು ಅನಿಸದೆ ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.