ADVERTISEMENT

ಮಹಿಳಾ ವಿಶ್ವಕಪ್‌: ಭಾರತ–ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ–ಆಸ್ಟ್ರೇಲಿಯಾ ಸೆಮಿಫೈನಲ್

ಪಿಟಿಐ
Published 3 ಮಾರ್ಚ್ 2020, 19:59 IST
Last Updated 3 ಮಾರ್ಚ್ 2020, 19:59 IST
   

ಸಿಡ್ನಿ: ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಸವಾಲು ಎದುರಿಸಲಿದೆ. ದಕ್ಷಿಣ ಆಫ್ರಿಕಾ–ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಮಂಗಳವಾರ ನಡೆಯಬೇಕಿದ್ದ ಪಂದ್ಯ ಒಂದೂ ಎಸೆತ ಕಾಣದೆ ರದ್ದಾದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ಪಾಯಿಂಟ್ಸ್‌ ಹಂಚಿ ಕೊಂಡವು. ಏಳು ಪಾಯಿಂಟ್ಸ್‌ ಕಲೆ ಹಾಕಿದ ದಕ್ಷಿಣ ಆಫ್ರಿಕಾ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಇಂಗ್ಲೆಂಡ್‌ (ಆರು ಪಾಯಿಂಟ್ಸ್‌) ಎರಡನೇ ಸ್ಥಾನದಲ್ಲಿ ಉಳಿಯಿತು.

ಗುಂಪು ಹಂತದಲ್ಲಿ ಇಂಗ್ಲೆಂಡ್‌ ಮೂರು ಗೆಲುವು ಒಂದು ಸೋಲು ಕಂಡಿದೆ. ‘ಎ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತಕ್ಕೆ ಅದು ಸವಾಲೊಡ್ಡಲಿದೆ. 2018ರ ಆವೃತ್ತಿಯ ನಾಲ್ಕರ ಘಟ್ಟದ ಪಂದ್ಯದಲ್ಲೂ ಭಾರತ– ಇಂಗ್ಲೆಂಡ್‌ ಮುಖಾಮುಖಿಯಾಗಿದ್ದವು. ಅಂದು ಇಂಗ್ಲೆಂಡ್‌ ಜಯಭೇರಿ ಮೊಳಗಿಸಿತ್ತು. ಆದರೆ ಫೈನಲ್‌ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು.

ADVERTISEMENT

ಗುಂಪು ಹಂತದಲ್ಲಿ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್‌ ತಲುಪುವತ್ತ ಚಿತ್ತ ನೆಟ್ಟಿದೆ.

ಮಳೆಗೆ ಕೊಚ್ಚಿಹೋದ ಪಾಕ್‌–ಥಾಯ್ಲೆಂಡ್‌ ಪಂದ್ಯ
ಪಾಕಿಸ್ತಾನ ಹಾಗೂ ಥಾಯ್ಲೆಂಡ್‌ ತಂಡಗಳ ನಡುವೆ ನಡೆಯುತ್ತಿದ್ದ ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಪಂದ್ಯ ಮಂಗಳವಾರ ಮಳೆಯಲ್ಲಿ ಕೊಚ್ಚಿಹೋಗಿದೆ. ಇದು ‘ಬಿ’ ಗುಂಪಿನಲ್ಲಿ ಪಾಕ್‌ ತಂಡದ ಕೊನೆಯ ಪಂದ್ಯವಾಗಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಥಾಯ್ಲೆಂಡ್‌ ತಂಡ, ಆರಂಭಿಕ ಆಟಗಾರ್ತಿ ನಟ್ಟಕನ್‌ ಚಾಂಟಮ್‌ ಅವರ ಅರ್ಧಶತಕ (56) ಹಾಗೂ ನಟ್ಟಾಯಾ ಬೂಚತಾಮ್‌ ಅವರ ಉಪಯುಕ್ತ ಬ್ಯಾಟಿಂಗ್‌ (44) ನೆರವಿನಿಂದ 3 ವಿಕೆಟ್‌ಗೆ 150 ರನ್‌ ಕಲೆಹಾಕಿತು. ಚಾಂಟಮ್‌ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಮೊದಲ ಅರ್ಧಶತಕ. ಇವರಿಬ್ಬರೂ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ್ದು 93 ರನ್‌.

ಗೆಲುವಿನ ಕನಸು ಕಾಣುತ್ತಿದ್ದ ಥಾಯ್ಲೆಂಡ್‌ಗೆ ಮಳೆ ನಿರಾಸೆ ತಂದಿತು. ಆ ತಂಡದ ಇನಿಂಗ್ಸ್‌ ಕೊನೆಗೊಂಡ ಬಳಿಕ ನಿರಂತರ ಮಳೆ ಹಣಿಯಿತು. ಪಾಕಿಸ್ತಾನದ ಇನಿಂಗ್ಸ್‌ ಆರಂಭವಾಗಲೇ ಇಲ್ಲ.

ಥಾಯ್ಲೆಂಡ್‌ ಈ ಟೂರ್ನಿಯಲ್ಲಿ ಮೊದಲ ಬಾರಿಗೆ 100ರ ಗಡಿ ದಾಟಿತು. ಅಂತರರಾಷ್ಟ್ರೀಯ ಟ್ವೆಂಟಿ–20 ಮಾದರಿಯಲ್ಲಿ ಥಾಯ್ಲೆಂಡ್‌ನ ಗರಿಷ್ಠ ಸ್ಕೋರ್‌ ಇದು. ಮತ್ತೊಂದು ಅಂಶವೆಂದರೆ ಪಾಕಿಸ್ತಾನ ತಂಡ 139ಕ್ಕಿಂತ ಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದಿಲ್ಲದಿರುವುದು ಥಾಯ್ಲೆಂಡ್‌ ತಂಡದಲ್ಲಿ ಜಯದ ಆಸೆ ಮೂಡಲು ಕಾರಣವಾಗಿತ್ತು.

ಸಂಕ್ಷಿಪ್ತ ಸ್ಕೋರ್‌: ಥಾಯ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 150 (ನಟ್ಟಕನ್‌ ಚಾಂಟಮ್‌ 56, ನಟ್ಟಾಯಾ ಬೂಚತಾಮ್‌, ನಿದಾ ದರ್‌ 17ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.