ADVERTISEMENT

ಈ ಸಲ ಐಸಿಸಿ ಪ್ರಶಸ್ತಿ ಗೆದ್ದೇ ಗೆಲ್ಲುವೆವು: ಹರ್ಮನ್‌ಪ್ರೀತ್ ವಿಶ್ವಾಸ

ಮುಂಬೈನಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಟ್ರೋಫಿ ಅನಾವರಣ

ಏಜೆನ್ಸೀಸ್
Published 11 ಆಗಸ್ಟ್ 2025, 13:28 IST
Last Updated 11 ಆಗಸ್ಟ್ 2025, 13:28 IST
<div class="paragraphs"><p>ಐಸಿಸಿ ಅಧ್ಯಕ್ಷ ಜಯ್‌ ಶಾ ಅವರು ಮುಂಬೈನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಅನ್ನು ಅನಾವರಣ ಮಾಡಿದರು.</p></div>

ಐಸಿಸಿ ಅಧ್ಯಕ್ಷ ಜಯ್‌ ಶಾ ಅವರು ಮುಂಬೈನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಅನ್ನು ಅನಾವರಣ ಮಾಡಿದರು.

   

ಮುಂಬೈ: ಈ ಹಿಂದೆ ಎರಡು ಬಾರಿ ‘ಅಂತಿಮ ಹಂತ’ದಲ್ಲಿ ಕೈತಪ್ಪಿದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್‌ ಪ್ರಶಸ್ತಿಯನ್ನು ಈ ಬಾರಿ ಗೆದ್ದೇಗೆಲ್ಲುವ ದೃಢನಿರ್ಧಾರವನ್ನು ತಂಡದ ಭಾರತ ತಂಡ ಹೊಂದಿದೆ ಎಂದು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಸೋಮವಾರ ತಿಳಿಸಿದರು.

ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಜಂಟಿ ಆತಿಥ್ಯ ಹೊಂದಿರುವ ಭಾರತ ತಂಡವು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ADVERTISEMENT

ಭಾರತ ವನಿತೆಯರು ಎರಡು ಬಾರಿ ವಿಶ್ವಕಪ್‌ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಕೊನೆಯ ಬಾರಿ– 2017ರಲ್ಲಿ ಆಸ್ಟ್ರೇಲಿಯಾ ಎದುರು 9 ರನ್‌ಗಳಿಂದ ಸೋಲನುಭವಿಸಿತ್ತು. ಆ ಬಾರಿ ಲಾರ್ಡ್ಸ್‌ನಲ್ಲಿ ಹರ್ಮನ್‌ಪ್ರೀತ್ ಅವರ ವೀರೋಚಿತ 51 ರನ್‌ಗಳ ಆಟ ಫಲ ನೀಡಲಿಲ್ಲ. ಈ ಬಾರಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

‘ತವರಿನ ಪ್ರೇಕ್ಷಕರೆದುರು ಆಡುವುದು ಎಂದೆಂದೂ ವಿಶೇಷ ಅನುಭವ. ಈ ಬಾರಿ ನೂರಕ್ಕೆ ನೂರರಷ್ಟು ಉತ್ತಮ ಆಟ ನೀಡುತ್ತೇವೆ. ಕೊನೆಗೂ ಭಾರತೀಯರೆಲ್ಲರೂ ಕಾಯುತ್ತಿರುವ ಆ ಪ್ರಶಸ್ತಿ ಗೆಲ್ಲುವೆವೆಂಬ ವಿಶ್ವಾಸವಿದೆ’ ಎಂದು ಕೌರ್ ಅವರು ಮಹಿಳಾ ವಿಶ್ವಕಪ್‌ ಅನಾವರಣ ಸಂದರ್ಭದಲ್ಲಿ ತಿಳಿಸಿದರು

ಕೌರ್‌ ನಾಯಕತ್ವದ ತಂಡ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ 3–2 ರಿಂದ ಟಿ20 ಸರಣಿಯನ್ನು ಮತ್ತು 2–1 ರಿಂದ ಏಕದಿನ ಪಂದ್ಯಗಳ ಸರಣಿ ಗೆದ್ದುಕೊಂಡು ಉತ್ಸಾಹದಲ್ಲಿದೆ.

‘ನಮ್ಮ ಆತ್ಮವಿಶ್ವಾಸದ ಮಟ್ಟ ಉತ್ತಮವಾಗಿದೆ. ಕೆಲವು ವರ್ಷಗಳಿಂದ ಆಡಿರುವ ರೀತಿ ನಮಗೆ ಸಾಕಷ್ಟು ವಿಶ್ವಾಸ ನೀಡಿದೆ’ ಎಂದು ಮಧ್ಯಮ ಕ್ರಮಾಂಕದ ಆಟಗಾರ್ತಿ ಭರವಸೆಯ ಮಾತುಗಳನ್ನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್‌ ತಂಡದ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅಭಿಪ್ರಾಯಪಟ್ಟರು.

ಪಾಕಿಸ್ತಾನವು ತನ್ನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ. ಬಹುರಾಷ್ಟ್ರಗಳ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ತಂಡಗಳು ತಟಸ್ಥ ತಾಣದಲ್ಲಿ ಆಡುವ ಕುರಿತಂತೆ ಆದ ಒಪ್ಪಂದದ ಅನುಸಾರ ಈ ಏರ್ಪಾಡು ಮಾಡಲಾಗಿದೆ.

ಫೈನಲ್ ಪಂದ್ಯ ನವೆಂಬರ್‌ 2ರಂದು ಬೆಂಗಳೂರು ಅಥವಾ (ಪಾಕಿಸ್ತಾನ ತಂಡ ಫೈನಲ್‌ಗೇರಿದಲ್ಲಿ) ಕೊಲಂಬೊದಲ್ಲಿ ನಡೆಯಲಿದೆ.

ಐಸಿಸಿ ಅಧ್ಯಕ್ಷ ಜಯ್‌ ಶಾ, ಭಾರತ ತಂಡದ ದಿಗ್ಗಜ ಆಲ್‌ರೌಂಡರ್‌ ಯುವರಾಜ್ ಸಿಂಗ್, ಮಹಿಳಾ ತಂಡದ ಮಾಜಿ ತಾರೆ ಮಿಥಾಲಿ ರಾಜ್ ಈ ವೇಳೆ ಹಾಜರಿದ್ದರು.

ಬೆಂಗಳೂರು ಪಂದ್ಯಗಳ ಸ್ಥಳಾಂತರ ಸಾಧ್ಯತೆ

ಬೆಂಗಳೂರು: ಮಹಿಳೆಯರ ವಿಶ್ವಕಪ್ ಏಕದಿನ ಟೂರ್ನಿ ಆರಂಭವಾಗಲು ಇನ್ನು ಐವತ್ತು ದಿನಗಳಷ್ಟೇ ಉಳಿದಿವೆ. ಆದರೆ ಟೂರ್ನಿಯ ಉದ್ಘಾಟನೆ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕುರಿತ ಗೊಂದಲ ಇನ್ನೂ ಪರಿಹಾರವಾಗಿಲ್ಲ. ರಾಜ್ಯ ಸರ್ಕಾರದಿಂದ ಇನ್ನೂ ಅನುಮತಿ ದೊರೆಯದೇ ಇರುವುದೇ ಇದಕ್ಕೆ ಕಾರಣವೆನ್ನಲಾಗಿದೆ. 

ಸೋಮವಾರದಿಂದ ಇಲ್ಲಿ ನಡೆಯಬೇಕಿದ್ದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯು ಸರ್ಕಾರದ ಅನುಮತಿ ಸಿಗದ ಕಾರಣ ಮೈಸೂರಿಗೆ ಸ್ಥಳಾಂತರವಾಗಿತ್ತು. ಇದೀಗ ಮುಂದಿನ ತಿಂಗಳ ಕೊನೆಯಲ್ಲಿ ಆರಂಭವಾಗುವ ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯಗಳ ಆಯೋಜನೆಗೂ ಅನುಮತಿ ಲಭಿಸಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ. 

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಹಿಂದೆ ನಿರ್ಧರಿಸಿದ್ದ ವೇಳಾಪಟ್ಟಿಯ ಪ್ರಕಾರ ಟೂರ್ನಿಯು ಸೆ.30 ರಿಂದ ನವೆಂಬರ್‌ 2ರವರೆಗೆ ನಡೆಯಲಿದೆ.  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ. 30ರಂದು ಉದ್ಘಾಟನೆ ಪಂದ್ಯ ನಡೆಯಲಿದ್ದು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ನಂತರ ಅಕ್ಟೋಬರ್ 3 ಮತ್ತು 6ರ ಪಂದ್ಯಗಳು, ಅ.30ರಂದು ಸೆಮಿಫೈನಲ್ ಪಂದ್ಯಗಳು ಕೂಡ ಇಲ್ಲಿಯೇ ನಿಗದಿಯಾಗಿವೆ.

ಆದರೆ, ಜೂನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆದ್ದ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಸಂಭವಿಸಿತ್ತು. 11 ಜನರು ಸಾವಿಗೀಡಾ ಗಿದ್ದರು. ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಸೇರಿದಂತೆ ಕೆಲವು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು.  ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. 

ಇನ್ನೊಂದೆಡೆ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿರುವ ಕೆಲವು ತಂಡಗಳ ಆಟಗಾರ್ತಿಯರು ಈಗಾಗಲೇ ಭಾರತಕ್ಕೆ ಬಂದಿಳಿದಿದ್ದಾರೆ. ನ್ಯೂಜಿಲೆಂಡ್ ಆಟಗಾರ್ತಿಯರು ಚೆನ್ನೈನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಉದ್ಘಾಟನೆ ಪಂದ್ಯದ ಆಯೋಜನೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಆರಂಭವಾಗಬೇಕಿವೆ. ಆದರೆ ಅನುಮತಿ ಸಿಗುವ ಕುರಿತು ಯಾವುದೇ ಖಚಿತ ಮಾಹಿತಿ ಇರದ ಕಾರಣ ಕೆಎಸ್‌ಸಿಎ ಕೂಡ ಗೊಂದಲದಲ್ಲಿದೆ. ಈ ಕುರಿತು ಸೋಮವಾರ ಐಸಿಸಿ, ಬಿಸಿಸಿಐ ಪದಾಧಿಕಾರಿಗಳು ಚರ್ಚೆ ನಡೆಸಿದ್ದಾರೆಂದೂ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.