ಏಷ್ಯಾ ಕಪ್ ಗೆದ್ದ ಸಂಭ್ರಮದಲ್ಲಿ ಭಾರತ ತಂಡ
ಚಿತ್ರ ಕೃಪೆ: @yogeshgoswami_
ನವದೆಹಲಿ: ಏಷ್ಯಾ ಕಪ್ ಟ್ರೋಫಿ ವಿವಾದ ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗಳು ಮುಂದಿನ ದಿನಗಳಲ್ಲಿ ಉಭಯತ್ರರಿಗೂ ಒಪ್ಪಿಗೆಯಾಗುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಿವೆ.
ದುಬೈನಲ್ಲಿ ಐಸಿಸಿ ಸಭೆಯ ಸಂದರ್ಭದಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರೊಂದಿಗೆ ಈ ಕಗ್ಗಂಟು ಪರಿಹರಿಸುವ ಬಗ್ಗೆ ಮಾತುಕತೆ ನಡೆಸಿರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ದುಬೈನಲ್ಲಿ ಸೆ. 28ರಂದು ನಡೆದ ಏಷ್ಯಾ ಕಪ್ ಟಿ20 ಫೈನಲ್‌ನಲ್ಲಿ ಭಾರತ ತಂಡ, ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.
ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ನಕ್ವಿ ಅವರಿಂದ, ಪಂದ್ಯದ ನಂತರ ಟ್ರೋಫಿ ಸ್ವೀಕರಿಸಲು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ನಿರಾಕರಿಸಿದ್ದರು. ಆದರೆ ಟ್ರೋಫಿ ಪ್ರದಾನ ಸಮಾರಂಭಲ್ಲಿ ಹಾಜರಿದ್ದ ನಕ್ವಿ, ಕೆಲಸಮಯ ಕಾದು ಕೆಲ ಸಿಬ್ಬಂದಿ ಜೊತೆ ಟ್ರೋಫಿಯೊಂದಿಗೆ ಕ್ರೀಡಾಂಗಣದಿಂದ ನಿರ್ಗಮಿಸಿದ್ದರು. ಟ್ರೋಫಿಯನ್ನು ದುಬೈನ ಎಸಿಸಿ ಕೇಂದ್ರ ಕಚೇರಿಯ ಕೊಠಡಿಯಲ್ಲಿಟ್ಟು ಬೀಗಹಾಕಲಾಗಿದೆ.
‘ನಾನು ಐಸಿಸಿ ಸಭೆಯ ಔಪಚಾರಿಕ ಮತ್ತು ಅನೌಪಚಾರಿಕ ಸಭೆಯ ಭಾಗವಾಗಿದ್ದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಸಹ ಹಾಜರಿದ್ದರು. ಟ್ರೋಫಿಯ ವಿಷಯ ಐಸಿಸಿ ಸಭೆಯ ಕಾರ್ಯಸೂಚಿಯಲ್ಲಿರಲಿಲ್ಲ. ಆದರೆ ಐಸಿಸಿಯು ತನ್ನ ಹಿರಿಯ ಸದಸ್ಯರ ಸಮ್ಮುಖದಲ್ಲಿ ನಮ್ಮಿಬ್ಬರ ನಡುವೆ ಮಾತುಕತೆಗೆ ಅವಕಾಶ ಕಲ್ಪಿಸಿತು’ ಎಂದು ಸೈಕಿಯಾ ತಿಳಿಸಿದ್ದಾರೆ.
ಅಭಿನಂದನೆ: ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದುಕೊಂಡ ಭಾರತ ತಂಡವನ್ನು ಐಸಿಸಿಯ ನಿರ್ದೇಶಕರ ಮಂಡಳಿ ಅಭಿನಂದಿಸಿತು ಎಂದು ಸೈಕಿಯಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.