ADVERTISEMENT

ಎರಡು ಒತ್ತಡಗಳ ನಡುವೆಯೂ ಗೆದ್ದ ಬಟ್ಲರ್

ಅಪ್ನ ಅನಾರೋಗ್ಯ ಮತ್ತು ಲಯ ಕಂಡುಕೊಳ್ಳುವ ಸವಾಲು: ರೂಟ್ ಶ್ಲಾಘನೆ

ಪಿಟಿಐ
Published 9 ಆಗಸ್ಟ್ 2020, 13:31 IST
Last Updated 9 ಆಗಸ್ಟ್ 2020, 13:31 IST
ಜೋಸ್ ಬಟ್ಲರ್
ಜೋಸ್ ಬಟ್ಲರ್   

ಮ್ಯಾಂಚೆಸ್ಟರ್:ಒಂದು ಕಡೆ ಕೈಕೊಟ್ಟಿದ್ದ ಫಾರ್ಮ್‌ನಿಂದಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭಯ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಆನಾರೋಗ್ಯದಿಂದ ಬಳಲುತ್ತಿರುವ ಅಪ್ಪ..

ಈ ಎರಡೂ ಒತ್ತಡಗಳ ನಡುವೆಯೂ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಸೋಲಿನ ದವಡೆಯಿಂದ ಗೆಲುವಿನ ವೇದಿಕೆಗೆ ತಂದು ನಿಲ್ಲಿಸಿದವರು ಜೋಸ್ ಬಟ್ಲರ್.

ಶನಿವಾರ ಮುಕ್ತಾಯವಾದ ಪಂದ್ಯದಲ್ಲಿ ಬಟ್ಲರ್ 75 ರನ್‌ ಗಳಿಸಿದ್ದರು. ಇಂಗ್ಲೆಂಡ್ ಮೂರು ವಿಕೆಟ್‌ಗಳಿಂದ ಗೆದ್ದಿತ್ತು. ಸರಣಿಯಲ್ಲಿ 1–0 ಮುನ್ನಡೆ ಗಳಿಸಿತ್ತು. ಅವರ ಈ ಸಾಧನೆಯನ್ನು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಜೋ ರೂಟ್‌ ಮನತುಂಬಿ ಶ್ಲಾಘಿಸಿದರು.

ADVERTISEMENT

’ನೋಡಿ ಬಟ್ಲರ್ ಹೇಗೆ ಆಡಿದರು. ಅವರ ಸಾಮರ್ಥ್ಯದ ಬಗ್ಗೆ ತಿಳಿಯಿರಿ. ಇನ್ನೂ ಮೂರ್ನಾಲ್ಕು ಟೆಸ್ಟ್‌ ಶತಕಗಳನ್ನು ಹೊಡೆಯುವ ಶಕ್ತಿ ಮತ್ತು ಪ್ರತಿಭೆ ಅವರಲ್ಲಿದೆ. ಪಾಕ್ ಸ್ಪಿನ್ನರ್‌ ಯಾಸೀರ್ ಶಾ ಅವರ ಪರಿಣಾಮಕಾರಿ ಸ್ಪಿನ್ ದಾಳಿಯನ್ನು ಎದುರಿಸಿದ ಅವರ ಮನೋಬಲ ಮತ್ತು ಇರಾದೆಗಳು ಬೆರಗು ಮೂಡಿಸಿದವು. ಅಲ್ಲದೇ ವೇಗಿಗಳ ಎಸೆತಗಳನ್ನೂ ಸಮಚಿತ್ತದಿಂದ ಎದುರಿಸಿ ನಿಂತರು‘ ಎಂದು ರೂಟ್ ವಿವರಿಸಿದರು.

ಸುಮಾರು 13 ಇನಿಂಗ್ಸ್‌ಗಳಿಂದ ಅವರು ಬ್ಯಾಟಿಂಗ್‌ ಲಯ ಕಳೆದುಕೊಂಡಿದ್ದರು. ಅದರಿಂದಾಗಿ ಇಂಗ್ಲೆಂಡ್ ಮಾಧ್ಯಮಗಳಲ್ಲಿ ಟೀಕೆಗಳೂ ವ್ಯಕ್ತವಾಗಿದ್ದವು. ತಂಡದಿಂದ ಅವರನ್ನು ಕೈಬಿಡುವ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು. ಆದರೆ ರೂಟ್ ಅವರ ಬೆನ್ನಿಗೆ ನಿಂತಿದ್ದರು. ನಾಯಕನ ವಿಶ್ವಾಸವನ್ನು ಬಟ್ಲರ್ ಉಳಿಸಿಕೊಂಡರು.

277 ರನ್‌ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡವು 117 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಟ್ಲರ್ ಮತ್ತು ಕ್ರಿಸ್ ವೋಕ್ಸ್‌ ಜೊತೆಯಾಟದಲ್ಲಿ 137 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.