ADVERTISEMENT

ಲಯನ್‌ಗೆ ಉಡುಗೊರೆ ಕೊಟ್ಟು ಹೃದಯ ಗೆದ್ದ ನಾಯಕ ಅಜಿಂಕ್ಯ ರಹಾನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2021, 8:23 IST
Last Updated 20 ಜನವರಿ 2021, 8:23 IST
   

ಬ್ರಿಸ್ಬೇನ್: ಇಲ್ಲಿನ ಗಾಬಾ ಮೈದಾನದಲ್ಲಿ 33 ವರ್ಷಗಳಲ್ಲಿ ಸೋಲರಿಯದ ಸರದಾರ ಎನಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ಭದ್ರಕೋಟೆಗೆ ನುಗ್ಗಿ ಸದೆಬಡಿದಿರುವಟೀಮ್ ಇಂಡಿಯಾ ಐತಿಹಾಸಿಕ ಸರಣಿ ಗೆಲುವು ದಾಖಲಿಸಿದೆ.

ಇದೇ ಸಂದರ್ಭದಲ್ಲಿ ನಾಯಕ ಅಜಿಂಕ್ಯ ರಹಾನೆ, ಟೀಮ್ ಇಂಡಿಯಾದ ಪರವಾಗಿ ಸಹಿ ಹಾಕಿದ ಜೆರ್ಸಿಯನ್ನು ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯನ್ ಅವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.

ನೇಥನ್ ಪಾಲಿಗಿದು 100ನೇ ಟೆಸ್ಟ್ ಪಂದ್ಯವಾಗಿತ್ತು. ಅಲ್ಲದೆ ತಮ್ಮ ಸ್ಮರಣೀಯ ಟೆಸ್ಟ್‌ನಲ್ಲಿ 400 ವಿಕೆಟ್‌ಗಳ ಮೈಲುಗಲ್ಲು ತಲುಪಲು ಸಾಧ್ಯವಾಗದೇ ಹೋಗಿರಬಹುದು. ಆದರೆ ಭಾರತ ತಂಡ ತೋರಿದ ಕ್ರೀಡಾಸ್ಫೂರ್ತಿಗೆ ಮನಸೋತಿದ್ದಾರೆ.

ADVERTISEMENT

ಅತ್ತ ಅಜಿಂಕ್ಯ ರಹಾನೆ ಟೆಸ್ಟ್ ನಾಯಕತ್ವದಲ್ಲಿ ಅಜೇಯ ಓಟ ಮುಂದುವರಿಸಿದ್ದಾರೆ. ಈ ವೆರಗಿನ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶ ದಾಖಲಿಸಿದ್ದಾರೆ.

ಆಕ್ರಮಣಕಾರಿ ವಿರಾಟ್ ಕೊಹ್ಲಿ ಅವರಿಗಿಂತಲೂ ವಿರುದ್ಧವಾಗಿ ತಾಳ್ಮೆಯ ನಾಯಕತ್ವ ಮೈಗೂಡಿಸಿರುವ ರಹಾನೆ, ಯುವ ತಂಡವನ್ನು ಮುನ್ನಡೆಸಿದ ರೀತಿಯು ನಿಜಕ್ಕೂ ಶ್ಲಾಘನೀಯ. ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲೂ ಕೂಲ್ ಆಗಿ ಪರಿಸ್ಥಿತಿಯನ್ನು ನಿಭಾಯಿಸಿದರು.

ವಿರಾಟ್ ಕೊಹ್ಲಿ ಅನುಪಸ್ಥಿತಿ ಕಾಡದಂತೆ ನೋಡಿಕೊಂಡರು. ಯುವ ಆಟಗಾರ ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ ಎದುರಾದಾಗ ತಂಡದ ಜೊತೆಗೆ ನಿಂತು ವಿಷಯದ ಗಂಭೀರತೆಯನ್ನು ಐಸಿಸಿಗೆ ಮುಟ್ಟಿಸಿದರು.

ಈ ಹಿಂದೆ ಬೆಂಗಳೂರಿನಲ್ಲಿ ಅಂತರ ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಘ್ಗಾನಿಸ್ತಾನ ವಿರುದ್ಧ ಬೃಹತ್ ಗೆಲುವು ದಾಖಲಿಸಿದಾಗಲೂ, ಟ್ರೋಫಿ ಎತ್ತಿ ಹಿಡಿಯುವ ವೇಳೆಯಲ್ಲಿ ಅಫ್ಗಾನ್ ಆಟಗಾರರನ್ನು ಜೊತೆಗೆ ಸೇರಿಸಿಕೊಂಡು ಫೋಟೊ ಕ್ಲಿಕ್ಕಿಸಿರುವುದು ರಹಾನೆ ಕ್ರೀಡಾಸ್ಫೂರ್ತಿಗೆ ಕೈಗನ್ನಡಿಯಾಗಿದೆ.

ಈಗ ಮಹೇಂದ್ರ ಸಿಂಗ್ ಧೋನಿ ಶೈಲಿಯಲ್ಲೇ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಬಳಿಕ ಅದನ್ನು ಯುವ ಆಟಗಾರ ಟಿ. ನಟರಾಜನ್‌ಗೆಹಸ್ತಾಂತರಿಸುವ ಮೂಲಕ, ಅಜಿಂಕ್ಯ ರಹಾನೆ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.