ಪ್ರಸಿದ್ಧ ಕೃಷ್ಣ ಅವರನ್ನು ಅಭಿನಂದಿಸಿದ ಕೆ.ಎಲ್. ರಾಹುಲ್
–ಪಿಟಿಐ ಚಿತ್ರ
ಸಿಡ್ನಿ: ಸುಮಾರು ಒಂದು ತಿಂಗಳಿಂದ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಪ್ರತಿಯೊಂದು ಟೆಸ್ಟ್ ತಾಣದಲ್ಲಿ ನೆಟ್ಸ್ ವೇಳೆ ಭಾರತ ತಂಡದ ಆಟಗಾರರೊಂದಿಗೆ ಶ್ರದ್ಧೆಯಿಂದ ತಾಲೀಮಿನಲ್ಲಿ ತೊಡಗಿದ್ದರು.
ಯುವ ಬೌಲರ್ ಹರ್ಷಿತ್ ರಾಣಾ ಅವರಿಗೆ ಬೇಗ ಅವಕಾಶ ದೊರೆಯಿತು. ಕೆಂಪು ಚೆಂಡಿನಲ್ಲಿ ತಮಗಿರುವ ಕೌಶಲದಿಂದ ಆಕಾಶ್ ದೀಪ್ ಸ್ಥಾನ ಪಡೆದರು. ಪ್ರಸಿದ್ಧ ಅವರು ಮಾತ್ರ ಹಿನ್ನೆಲೆಯಲ್ಲಿದ್ದು ತಮ್ಮ ಅವಕಾಶಕ್ಕಾಗಿ ಎದುರುನೋಡುತ್ತಿದ್ದರು.
ರಾಣಾ ಭರವಸೆ ಮೂಡಿಸಿದರೂ, ಕೊನೆಗೆ ಪರದಾಡಿದರು. ಆಕಾಶ್ ದೀಪ್ ಅವರಿಗೆ ಬೆನ್ನುನೋವು ಕಾಡಿದ ಪರಿಣಾಮ ಪ್ರಸಿದ್ಧ ಅವರಿಗೆ ಕೊನೆಗೂ ಕೊನೆಯ ಟೆಸ್ಟ್‌ನಲ್ಲಿ ಅವಕಾಶ ಒಲಿಯಿತು. ಈ ಹೋರಾಟದ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರು.
ಪ್ರಸಿದ್ಧ ಅವರು ಆರಂಭದಲ್ಲಿ ಸ್ಥಿರತೆಗಾಗಿ ಕೊಂಚ ಹೋರಾಟ ನಡೆಸಿದರು. ಲಯ ಕಂಡುಕೊಂಡ ಬಳಿಕ ಅವರು, ಸ್ಟೀವ್ ಸ್ಮಿತ್, ಬ್ಲೂ ವೆಬ್‌ಸ್ಟಾರ್ ಮತ್ತು ಅಲೆಕ್ಸ್ ಕ್ಯಾರಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಆಸ್ಟ್ರೇಲಿಯಾದ ನಾಲ್ಕು ಅಗ್ರ ಬ್ಯಾಟರ್‌ಗಳ ಪೈಕಿ ಮೂವರ ವಿಕೆಟ್ ಪಡೆದು ಸಂಭ್ರಮಿಸಿದರು.
ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿ, ಎದುರಾಳಿ ತಂಡಕ್ಕೆ ಕಡಿವಾಣ ಹಾಕಿದರು.
‘ಊಟಕ್ಕೆ ಹೋಗುವಾಗ, ನಾನು ಎಲ್ಲಿ ಬೌಲ್ ಮಾಡುತ್ತಿದ್ದೆ, ನನ್ನ ಲೆಂಗ್ತ್ ಸರಿಯಾಗಿದೆಯೇ ಎಂದು ಯೋಚಿಸಿದ್ದೆ. ಲಂಚ್ ವೇಳೆ ಅನಾಲಿಸ್ಟ್ ಜೊತೆ ಕುಳಿತು ಚರ್ಚಿಸಿದೆ. ಎಲ್ಲಿ ನಾನು ಬೌಲ್ ಮಾಡಬೇಕೆಂದಿದ್ದೆ ಎಂಬುದನ್ನು ತಿಳಿದುಕೊಂಡು ಅದರಂತೆ ಬೌಲಿಂಗ್ ಮಾಡಿದ್ದು ನೆರವಾಯಿತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಸಿದ್ಧ ಹೇಳಿದರು.
ಭಾರತ ಎ ತಂಡದೊಂದಿಗೆ ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಪ್ರಸಿದ್ಧ ಉತ್ತಮ ಪ್ರದರ್ಶನ ತೋರಿದ್ದರು. ಆಸ್ಟ್ರೇಲಿಯಾ ಎ ವಿರುದ್ಧ ಮ್ಯಾಕೆ ಮತ್ತು ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.