ADVERTISEMENT

IND vs ENG: ಕೊಹ್ಲಿಗೆ ಸತತ ನಾಲ್ಕನೇ ಸೋಲು; ವಾನ್‌ ದಾಖಲೆ ಸರಿಗಟ್ಟಿದ ರೂಟ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 11:38 IST
Last Updated 9 ಫೆಬ್ರುವರಿ 2021, 11:38 IST
ಪಂದ್ಯದ ವೇಳೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ
ಪಂದ್ಯದ ವೇಳೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ   

ಚೆನ್ನೈ: ಭಾರತ ತಂಡವು ಇಂಗ್ಲೆಂಡ್‌ ವಿರುದ್ಧ ಆರಂಭವಾಗಿರುವ ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 227 ರನ್‌ ಅಂತರದ ಸೋಲು ಕಂಡಿದೆ.ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಎದುರಾದ ಸತತ ನಾಲ್ಕನೇ ಟೆಸ್ಟ್‌ ಸೋಲು ಇದಾಗಿದೆ.

ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವಿರಾಟ್‌ ಕೊಹ್ಲಿ ಪಡೆ ಡಿಸೆಂಬರ್‌ ತಿಂಗಳಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು 8 ವಿಕೆಟ್‌ಗಳಿಂದ ಸೋತಿತ್ತು. ಅದಾದ ಬಳಿಕ ಕೊಹ್ಲಿಪಿತೃತ್ವ ರಜೆ ಪಡೆದು ತವರಿಗೆ ಮರಳಿದ್ದರು. ಕೊಹ್ಲಿ ನಿರ್ಗಮನ ಹಾಗೂ ಪ್ರಮುಖ ಆಟಗಾರರು ಗಾಯಗೊಂಡಿದ್ದರ ನಡುವೆಯೂ ಅಜಿಂಕ್ಯ ರಹಾನೆ ಉಳಿದ ಮೂರು ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.ನಾಲ್ಕು ಪಂದ್ಯಗಳ ಸರಣಿಯ ಎರಡು ಮತ್ತು ಕೊನೆಯ ಪಂದ್ಯಗಳನ್ನು ಗೆದ್ದುಕೊಂಡಿದ್ದ ರಹಾನೆ ಪಡೆ, ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಈ ಸರಣಿಗೂ ಮುನ್ನ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಪಡೆ, ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿತ್ತು. ಹೀಗಾಗಿ ವಿರಾಟ್‌ ಕೊಹ್ಲಿ ಟೀಂ ಇಂಡಿಯಾವನ್ನು ಗೆಲುವಿನ ಹಳಿಗೆ ಮರಳಿಸುವ ಒತ್ತಡದಲ್ಲಿದ್ದಾರೆ.

ADVERTISEMENT

ಇದೆಲ್ಲದರ ನಡುವೆಕೊಹ್ಲಿ ತವರಿನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದು‌ ಕೊಟ್ಟ ಭಾರತ ನಾಯಕ ಎನಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬುದು ವಿಶೇಷ. ಅವರು ನಾಯಕರಾಗಿಭಾರತದಲ್ಲಿ 20 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ‌, ಕೊಹ್ಲಿಗಿಂತ ಒಂದು ಪಂದ್ಯ ಮುಂದಿದ್ದಾರೆ.

ವಾನ್‌ ದಾಖಲೆ ಸರಿಗಟ್ಟಿದ ರೂಟ್
ಇಂಗ್ಲೆಂಡ್‌ ತಂಡವನ್ನು 47 ಪಂದ್ಯಗಳಲ್ಲಿ ಮುನ್ನಡೆಸಿರುವಜೋ ರೂಟ್‌, ಭಾರತ ವಿರುದ್ಧದ ಗೆಲುವಿನೊಂದಿಗೆ ಸ್ಮರಣೀಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು. ನಾಯಕನಾಗಿ ಇದು ಅವರಿಗೆ 26ನೇ ಜಯ. ಇದರೊಂದಿಗೆ ಇಂಗ್ಲೆಂಡ್‌ ಪರ ಅತಿಹೆಚ್ಚು ಪಂದ್ಯ ಗೆದ್ದ ನಾಯಕ ಎಂಬ ಶ್ರೇಯವನ್ನು ಮಾಜಿ ಕ್ರಿಕೆಟಿಗ ಮೈಕಲ್‌ ವಾನ್‌ ಜೊತೆ ಹಂಚಿಕೊಂಡರು.

ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್

ನಾಯರಾಗಿ51 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವಾನ್‌ ಕೂಡ 26 ಸಲ ಜಯದ ಸವಿಯುಂಡಿದ್ದರು. ಉಳಿದಂತೆ,ಆ್ಯಂಡ್ರೋ ಸ್ಟ್ರಾಸ್‌ ಮತ್ತು ಆಲಿಸ್ಟರ್‌ ಕುಕ್‌ ತಲಾ 24 ಜಯ ಹಾಗೂ ಪೀಟರ್‌ ಮೇ 20 ಸಲ ಗೆಲುವು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.