ADVERTISEMENT

IND vs ENG: ರೂಟ್‌, ಬೆಸ್ಟೋ ಭರ್ಜರಿ ಆಟ – ಗೆಲುವಿನತ್ತ ಇಂಗ್ಲೆಂಡ್‌ ದಾಪುಗಾಲು

ಅಂತಿಮ ದಿನ ಆತಿಥೇಯರಿಗೆ ಬೇಕಿದೆ 119 ರನ್

ಪಿಟಿಐ
Published 4 ಜುಲೈ 2022, 19:06 IST
Last Updated 4 ಜುಲೈ 2022, 19:06 IST
ಇಂಗ್ಲೆಂಡ್‌ಗೆ ಆಸರೆಯಾದ ಜೋ ರೂಟ್ –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ಗೆ ಆಸರೆಯಾದ ಜೋ ರೂಟ್ –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಂ: ಜೋ ರೂಟ್‌ ಮತ್ತು ಜಾನಿ ಬೆಸ್ಟೋ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ, ಭಾರತ ವಿರುದ್ಧದ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ.

ಜಯಕ್ಕೆ 378 ರನ್‌ಗಳ ಗುರಿ ಪಡೆದಿರುವ ಆತಿಥೇಯ ತಂಡ ನಾಲ್ಕನೇ ದಿನ, ಸೋಮವಾರದ ಆಟದ ಅಂತ್ಯಕ್ಕೆ 57 ಓವರ್‌ಗಳಲ್ಲಿ 3 ವಿಕೆಟ್‌ಗೆ 259 ರನ್‌ ಕಲೆಹಾಕಿದೆ.

ಅಂತಿಮ ದಿನವಾದ ಮಂಗಳವಾರ 119 ರನ್‌ ಗಳಿಸುವ ಸವಾಲು ಬೆನ್‌ ಸ್ಟೋಕ್ಸ್‌ ಬಳಗದ ಮುಂದಿದೆ. ಏಳು ವಿಕೆಟ್‌ಗಳು ಕೈಯಲ್ಲಿರುವುದರಿಂದ ಇಂಗ್ಲೆಂಡ್‌, ದಾಖಲೆಯ ಗೆಲುವಿನ ನಿರೀಕ್ಷೆಯಲ್ಲಿದೆ. ಜಸ್‌ಪ್ರೀತ್‌ ಬೂಮ್ರಾ ನೇತೃತ್ವದಲ್ಲಿ ಬೌಲರ್‌ಗಳು ‘ಪವಾಡ’ ನಡೆಸಿದರೆ ಮಾತ್ರ ಭಾರತಕ್ಕೆ ಜಯ ಒಲಿಯಬಹುದು.

ADVERTISEMENT

ಪಂದ್ಯದ ಮೊದಲ ಮೂರು ದಿನ ಭಾರತ ತಂಡ ಪ್ರಭುತ್ವ ಸಾಧಿಸಿದ್ದರೆ, ಸೋಮವಾರದ ಆಟವನ್ನು ಇಂಗ್ಲೆಂಡ್‌ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ರೂಟ್‌ (ಬ್ಯಾಟಿಂಗ್‌ 76, 112 ಎಸೆತ) ಮತ್ತು ಬೆಸ್ಟೋ (ಬ್ಯಾಟಿಂಗ್ 72, 87 ಎಸೆತ) ನಾಲ್ಕನೇ ವಿಕೆಟ್‌ಗೆ 150 ರನ್‌ ಸೇರಿಸಿದ್ದು, ಬೂಮ್ರಾ ಬಳಗದ ಗೆಲುವಿನ ಕನಸಿಗೆ ಅಡ್ಡಿಯಾಗಿದ್ದಾರೆ.

ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡಕ್ಕೆ ಅಲೆಕ್ಸ್‌ ಲೀಸ್‌ (65 ಎಸೆತಗಳಲ್ಲಿ 56) ಮತ್ತು ಜ್ಯಾಕ್‌ ಕ್ರಾಲಿ (76 ಎಸೆತಗಳಲ್ಲಿ 46) ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರು ಭಾರತದ ಆರಂಭಿಕ ದಾಳಿಯನ್ನು ಸಮರ್ಥವಾಗಿ ಎದುರಿಸಿ ಮೊದಲ ವಿಕೆಟ್‌ಗೆ 107 ರನ್‌ ಸೇರಿಸಿದರು.

ಉತ್ತಮವಾಗಿ ಆಡುತ್ತಿದ್ದ ಕ್ರಾಲಿ ಅವರನ್ನು ಬೌಲ್ಡ್‌ ಮಾಡಿದ ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್‌ ಬೂಮ್ರಾ ಈ ಜತೆಯಾಟ ಮುರಿದರು. ತಮ್ಮ ಮುಂದಿನ ಓವರ್‌ನಲ್ಲಿ ಒಲಿ ಪೋಪ್‌ (0) ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಅಲ್ಪ ಸಮಯದ ಬಳಿಕ ಲೀಸ್‌ ರನೌಟಾದರು.

ಎರಡು ರನ್‌ ಸೇರಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ಆಘಾತ ಅನುಭವಿಸಿತು. ಈ ವೇಳೆ ಜತೆಯಾದ ರೂಟ್‌ ಮತ್ತು ಬೆಸ್ಟೋ ತಂಡಕ್ಕೆ ಆಸರೆಯಾದರು. ಬೆಸ್ಟೋ 14 ರನ್‌ ಗಳಿಸಿದ್ದಾಗ ಹನುಮ ವಿಹಾರಿ ಕ್ಯಾಚ್‌ ಕೈಚೆಲ್ಲಿದ್ದರು. ಅದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿದೆ.

ಪಂತ್‌ ಅರ್ಧಶತಕ: ಇದಕ್ಕೂ ಮುನ್ನ 3 ವಿಕೆಟ್‌ಗೆ 125 ರನ್‌ಗಳಿಂದ ದಿನದಾಟ ಮುಂದುವರಿಸಿದ ಭಾರತ ತಂಡ 120 ರನ್‌ ಸೇರಿಸಿ, 245 ರನ್‌ಗಳಿಗೆ ಆಲೌಟಾಯಿತು.

ಚೇತೇಶ್ವರ ಪೂಜಾರ (66 ರನ್, 168 ಎ) ಮತ್ತು ರಿಷಭ್‌ ಪಂತ್‌ (57 ರನ್‌, 86 ಎ) ನಾಲ್ಕನೇ ವಿಕೆಟ್‌ಗೆ 78 ರನ್‌ ಸೇರಿಸಿದರು.ಚೆನ್ನಾಗಿ ಆಡುತ್ತಿದ್ದ ಪೂಜಾರ ವಿಕೆಟ್‌ ಪಡೆದ ಸ್ಟುವರ್ಟ್‌ ಬ್ರಾಡ್‌ ಈ ಜತೆಯಾಟ ಮುರಿದರು. ಶ್ರೇಯಸ್ ಅಯ್ಯರ್‌ ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಶತಕ ಗಳಿಸಿದ್ದ ಪಂತ್‌, ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು. ಆದರೆ ಅರ್ಧಶತಕ ಪೂರೈಸಿದ ಬಳಿಕ ಅವರು ಹೆಚ್ಚುಹೊತ್ತು ನಿಲ್ಲಲಿಲ್ಲ. ಜ್ಯಾಕ್‌ ಲೀಚ್‌ ಬೌಲಿಂಗ್‌ನಲ್ಲಿ ‘ರಿವರ್ಸ್‌ ಪುಲ್’ ಮಾಡುವ ಪ್ರಯತ್ನದಲ್ಲಿ ಮೊದಲ ಸ್ಲಿಪ್‌ನಲ್ಲಿ ಜೋ ರೂಟ್‌ಗೆ ಕ್ಯಾಚಿತ್ತರು.

ವಿದೇಶದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ ಅರ್ಧಶತಕ ಗಳಿಸಿದ ಭಾರತದ ಮೊದಲ ವಿಕೆಟ್‌ಕೀಪರ್‌ ಎಂಬ ಗೌರವಕ್ಕೆ ಅವರು ಭಾಜನರಾದರು.

ಪಂತ್‌ ಔಟಾದಾಗ ತಂಡದ ಮೊತ್ತ 198 ಆಗಿತ್ತು. ರವೀಂದ್ರ ಜಡೇಜ (23) ಅವರಿಗೆ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್‌ ಸಿಗಲಿಲ್ಲ. ಬೆನ್‌ ಸ್ಟೋಕ್ಸ್‌ 33 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದರೆ, ಸ್ಟುವರ್ಟ್‌ ಬ್ರಾಡ್‌ ಮತ್ತು ಮ್ಯಾಟಿ ಪಾಟ್ಸ್‌ ತಲಾ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.