ADVERTISEMENT

IND vs ENG: ದಾಖಲೆ ರನ್ ಚೇಸಿಂಗ್‌ ಪಂದ್ಯದಲ್ಲೂ ರೋಹಿತ್ ಫೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2021, 16:56 IST
Last Updated 8 ಫೆಬ್ರುವರಿ 2021, 16:56 IST
   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ.

ಅಂತಿಮ ಇನ್ನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ದಾಖಲೆಯ 420 ರನ್‌ ಬೇಕಾಗಿದೆ. ಈ ನಡುವೆ ಅನುಭವಿ ಆರಂಭಿಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ ಉತ್ತಮ ಆರಂಭ ನೀಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಜ್ಯಾಕ್ ಲೀಚ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗಿರುವ ರೋಹಿತ್ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ADVERTISEMENT

2008ನೇ ಇಸವಿಯಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು ದಾಖಲೆಯ 387 ರನ್ ಗುರಿ ಬೆನ್ನಟ್ಟಿತ್ತು. ಅಂದು ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

68 ಎಸೆತಗಳಲ್ಲೇ ವೀರು 83 ರನ್ ಸಿಡಿಸಿದ್ದರು. ಬಳಿಕ ಕೊನೆಯ ದಿನದಾಟದಲ್ಲಿ ಸಚಿನ್ ತೆಂಡೂಲ್ಕರ್ ಶತಕ (103*) ಹಾಗೂ ಯುವರಾಜ್ ಸಿಂಗ್ (85*) ಅರ್ಧಶತಕದ ನೆರವಿನಿಂದ ಭಾರತ ಆರು ವಿಕೆಟ್ ಅಂತರದ ಸ್ಮರಣೀಯ ಗೆಲುವು ದಾಖಲಿಸಿತ್ತು.

ರೋಹಿತ್ ಶರ್ಮಾ ಅವರಿಂದಲೂ ವೀರೇಂದ್ರ ಸೆಹ್ವಾಗ್‌ಗೆ ಸಮಾನವಾದ ಇನ್ನಿಂಗ್ಸ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಚೆನ್ನೈ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಪ್ರಥಮ ಇನ್ನಿಂಗ್ಸ್‌ನಲ್ಲೂ ಕೇವಲ 6 ರನ್ ಗಳಿಸಿ ಔಟಾಗಿದ್ದರು.

ರೋಹಿತ್ ಶರ್ಮಾ ಬದಲಿಗೆ ಕರ್ನಾಟಕದ ಮಯಂಕ್ ಅಗರವಾಲ್ ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಅಭಿಮಾನಿಗಳಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿಈ ಎಲ್ಲ ಟೀಕೆಗಳಿಗೂ ಮುಂದಿನ ಪಂದ್ಯದಲ್ಲಿರೋಹಿತ್ ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.