ಸಂಗ್ರಹ ಚಿತ್ರ
ಪಿಟಿಐ
ರಾಜ್‌ಕೋಟ್: ಆರಂಭ ಆಟಗಾರ ಬೆನ್ ಡಕೆಟ್ ಅವರ ಸೊಗಸಾದ ಅರ್ಧ ಶತಕ, ಲಿಯಾಮ್ ಲಿವಿಂಗ್‌ಸ್ಟೋನ್ ಉಪಯುಕ್ತ ಆಟ, ನಂತರ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಮೂರನೇ ಟಿ20 ಪಂದ್ಯದಲ್ಲಿ ಮಂಗಳವಾರ ಭಾರತ ತಂಡದ ಮೇಲೆ 26 ರನ್‌ಗಳ ಜಯ ಪಡೆಯಿತು.
ತನ್ಮೂಲಕ ಐದು ಪಂದ್ಯಗಳ ಸರಣಿಯನ್ನು ಜೀವಂತ ವಾಗಿರಿಸಿಕೊಡಿತು. ಸರಣಿಯ ಹಿನ್ನಡೆಯನ್ನು 1–2ಕ್ಕೆ ಇಳಿಸಿತು.
ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಲು ಕಳಹಿಸಲ್ಪಟ್ಟ ಇಂಗ್ಲೆಂಡ್ ತಂಡವು, ವರುಣ್ ಚಕ್ರವರ್ತಿ (24ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್ ನಡುವೆಯೂ 9 ವಿಕೆಟ್‌ಗೆ 171 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ಆರಂಭದಲ್ಲಿ ಡಕೆಟ್ (51; 28ಎಸೆತ, 4X7, 6X2) ಅವರ ಬಿರುಸಿನ ಅರ್ಧಶತಕ ಮತ್ತು ಕೊನೆಯಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (43; 24ಎ, 4X1, 6X5) ಅವರ ಉಪಯುಕ್ತ ಆಟ ಇದಕ್ಕೆ ಕಾರಣವಾಯಿತು.
ಭಾರತ ಉತ್ತಮ ಆರಂಭ ಪಡೆಯಲಿಲ್ಲ. ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಂಜು ಸ್ಯಾಮ್ಸನ್ ಮೂರನೇ ಸಲ ಜೋಫ್ರಾ ಆರ್ಚರ್ ಅವರಿಗೆ ವಿಕೆಟ್ ತೆತ್ತರು. ಆರಂಭ ಆಟಗಾರ ಅಭಿಷೇಕ್ ಶರ್ಮಾ (24) ಆರಂಭದಲ್ಲಿ ಕೆಲಕಾಲ ಅಬ್ಬರಿಸಿದರು. ನಂತರ ಹಾರ್ದಿಕ್ ಪಾಂಡ್ಯ (40, 35ಎ, 4X1, 6X2) ಚೇತರಿಕೆಯ ಆಟ ತೋರಿದರೂ, ರನ್ ವೇಗ ನಿರೀಕ್ಷಿಸಿದಷ್ಟು ಹೆಚ್ಚಲಿಲ್ಲ. ಇನ್ನೊಂದು ಕಡೆ ಬ್ಯಾಟರ್‌ಗಳು ರನ್‌ಗಳಿಸುವ ವೇಗದಲ್ಲಿ ವಿಕೆಟ್‌ಗಳನ್ನು ನೀಡಿದರು.
ಇದಕ್ಕೆ ಮೊದಲು, ದೀರ್ಘಕಾಲದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ಪುನರಾಗಮನ ಮಾಡಿದರೂ ವಿಕೆಟ್ ಪಡೆಯಲು ವಿಫಲರಾದರು. ವರುಣ್ ಚಕ್ರವರ್ತಿ ಅವರ ಸ್ಪಿನ್ ಸುಳಿಯಲ್ಲಿ ಕೊಚ್ಚಿ ಹೋಗಬೇಕಿದ್ದ ಇಂಗ್ಲೆಂಡ್ ತಂಡಕ್ಕೆ ಡಕೆಟ್ ಅರ್ಧಶತಕದ ಮೂಲಕ ಆಸರೆಯಾದರು.
ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಫಿಲ್ ಸಾಲ್ಟ್ ವಿಕೆಟ್ ಉರುಳಿಸುವಲ್ಲಿ ಹಾರ್ದಿಕ್ ಯಶಸ್ವಿ ಯಾದರು. ಡಕೆಟ್ ಜೊತೆಗೂಡಿದ ನಾಯಕ ಬಟ್ಲರ್ (24; 22ಎ) ಇನಿಂಗ್ಸ್‌ಗೆ ಚೇತರಿಕೆ ನೀಡಲು ಪ್ರಯತ್ನಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರು.
ಇನ್ನೊಂದೆಡೆ ಮಧ್ಯಮ ಹಂತದಲ್ಲಿ ವರುಣ್ ಗೂಗ್ಲಿ ಎಸೆತಗಳ ಕೌಶಲ ತೋರಿ ಪ್ರವಾಸಿ ತಂಡವನ್ನು ಕಾಡಿದರು. ಈ ನಡುವೆಯೂ ಲಿವಿಂಗ್‌ಸ್ಟೋನ್ ಮಿಂಚಿದರು. ಅವರಿಗೆ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಹಾದಿ ತೋರಿದರು. ವರುಣ್ ಅವರೊಂದಿಗೆ ರವಿ ಬಿಷ್ಣೋಯಿ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು.
ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್: 20 ಓವರ್‌ಗಳಲ್ಲಿ 9ಕ್ಕೆ171 (ಬೆನ್ ಡಕೆಟ್ 51, ಜೋಸ್ ಬಟ್ಲರ್ 24, ಲಿಯಾಮ್ ಲಿವಿಂಗ್‌ಸ್ಟೋನ್ 43, ಹಾರ್ದಿಕ್ ಪಾಂಡ್ಯ 33ಕ್ಕೆ2, ವರುಣ ಚಕ್ರವರ್ತಿ 24ಕ್ಕೆ5); ಭಾರತ: 20 ಓವರುಗಳಲ್ಲಿ 9 ವಿಕೆಟ್‌ಗೆ 146 (ಅಭಿಷೇಕ್ ಶರ್ಮಾ 24, ಹಾರ್ದಿಕ್ ಪಾಂಡ್ಯ 40; ಜೋಫ್ರಾ ಆರ್ಚರ್ 33ಕ್ಕೆ2, ಬ್ರೈಡನ್ ಕರ್ಸ್ 29ಕ್ಕೆ2, ಜೇಮಿ ಓವರ್ಟನ್ 23ಕ್ಕೆ3).
ಪಂದ್ಯದ ಆಟಗಾರ: ವರುಣ್ ಚಕ್ರವರ್ತಿ
ಕಣಕ್ಕಿಳಿದ ಮೊಹಮ್ಮದ್ ಶಮಿ
ವೇಗಿ ಮೊಹಮ್ಮದ್ ಶಮಿ ಅವರು 14 ತಿಂಗಳುಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಕಣಕ್ಕಿಳಿದರು. ಅವರು 3 ಓವರ್ ಬೌಲಿಂಗ್ ಮಾಡಿದರು. 25 ರನ್ ಕೊಟ್ಟರು. ಆದರೆ ಅವರಿಗೆ ಒಂದೂ ವಿಕೆಟ್ ಒಲಿಯಲಿಲ್ಲ. ಅವರು ಕೆಲವು ಎಸೆತಗಳಲ್ಲಿ ಸುಮಾರು 140 ಕಿ.ಮೀ ವೇಗದಲ್ಲಿ ಹಾಕಿದರು. ಆರಂಭದ ಸ್ಪೆಲ್‌ನಲ್ಲಿ ಎರಡು ಓವರ್ ಹಾಕಿದರು. ನಂತರ 19ನೇ ಓವರ್ ಹಾಕಿದರು. ಅದರಲ್ಲಿ ಅವರು 11 ರನ್ ಕೊಟ್ಟರು.ಶಮಿ ಅವರು ತಮ್ಮ ಹಿಮ್ಮಡಿಯ ಗಾಯದ ಶಸ್ತ್ರಚಿಕಿತ್ಸೆಯಿಂದಾಗಿ ದೀರ್ಘ ಕಾಲದಿಂದ ಆರೈಕೆಯಲ್ಲಿದ್ದರು. 2023ರ ನವೆಂಬರ್‌ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಅವರು ಆಡಿದ ನಂತರ ಅವರು ಕಣಕ್ಕಿಳಿದಿರಲಿಲ್ಲ. ಶಮಿ ಆಡಿದ್ದರಿಂದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.