ADVERTISEMENT

IND vs PAK | ಮ್ಯಾಚ್ ರೆಫ್ರಿ ವಜಾಗೊಳಿಸಿ ಎಂದ ಪಾಕ್‌ ಮನವಿ ತಿರಸ್ಕರಿಸಿದ ಐಸಿಸಿ

ಪಿಟಿಐ
Published 16 ಸೆಪ್ಟೆಂಬರ್ 2025, 6:48 IST
Last Updated 16 ಸೆಪ್ಟೆಂಬರ್ 2025, 6:48 IST
   

ದುಬೈ: ಹಾಲಿ ಏಷ್ಯಾ ಕಪ್‌ನ ಅಧಿಕಾರಿಗಳ ಪ್ಯಾನೆಲ್‌ನಿಂದ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌ ಅವರನ್ನು ಕಿತ್ತುಹಾಕಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಮಂಗಳವಾರ ತಳ್ಳಿಹಾಕಿದೆ. 

ಭಾನುವಾರ ನಡೆದ ಪಂದ್ಯದ ಟಾಸ್‌ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಹಸ್ತಲಾಘವ ಮಾಡದಂತೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಮ್ಯಾಚ್‌ ರೆಫ್ರಿಯಾಗಿದ್ದ ಪೈಕ್ರಾಫ್ಟ್‌ ಅವರು ಸೂಚಿಸಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಐಸಿಸಿಗೆ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಿತ್ತು.

ಟೂರ್ನಿ ಬಹಿಷ್ಕರಿಸುವುದಾಗಿ ಪಾಕ್‌ ಬೆದರಿಕೆಯೊಡ್ಡಿದೆ ಎನ್ನುವ ವರದಿಗಳ ನಡುವೆಯೇ ಐಸಿಸಿ ಈ ನಿಲುವು ತಳೆದಿದೆ.

ADVERTISEMENT

‘ಪೈಕ್ರಾಫ್ಟ್‌ ಅವರನ್ನು ತೆಗೆದುಹಾಕುವುದಿಲ್ಲ. ಮನವಿ ತಿರಸ್ಕರಿಸಲಾಗಿದೆ ಎಂದು ಐಸಿಸಿ ಪಾಕಿಸ್ತಾನಕ್ಕೆ ಸೋಮವಾರ ರಾತ್ರಿ ಉತ್ತರಿಸಿದೆ’ ಎಂದು ಐಸಿಸಿ ಮೂಲವೊಂದು ಪಿಟಿಐಗೆ ತಿಳಿಇದೆ.

ಜಿಂಬಾಬ್ವೆಯ 69 ವರ್ಷ ವಯಸ್ಸಿನ ಆಟಗಾರ ಬುಧವಾರ ನಿಗದಿಯಾಗಿರುವ ಪಾಕಿಸ್ತಾನ–ಯುಎಇ ನಡುವಣ ಗುಂಪು ಹಂತದ ಪಂದ್ಯಕ್ಕೂ ರೆಫ್ರಿ ಆಗಿದ್ದಾರೆ. 695 ಅಂತರರಾಷ್ಟ್ರೀಯ ಪಂದ್ಯಗಳನ್ನು ನಿರ್ವಹಿಸಿರುವ ಪೈಕ್ರಾಫ್ಟ್‌ ಐಸಿಸಿಯ ಅತಿ ಹಿರಿಯ ರೆಫ್ರಿಯಾಗಿದ್ದಾರೆ.

ಪೈಕ್ರಾಫ್ಟ್‌ ಸೂಚನೆಯಂತೆ ಉಭಯ ನಾಯಕರು ಸಾಂಪ್ರದಾಯಿಕ ಹಸ್ತಲಾಘವ ಮಾಡಿರಲಿಲ್ಲ ಎಂದು ಪಾಕ್‌ ತಂಡದ ಮ್ಯಾನೇಜರ್ ನವೆದ್‌ ಚೀಮಾ ಅವರು ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ಗೆ ದೂರು ನೀಡಿದ್ದರು.

ಟೂರ್ನಿಯ ವೇಳೆ ಅನುಸರಿಸಬೇಕಾದ ನೀತಿ–ನಿಯಮಗಳ ಬಗ್ಗೆ ಸ್ವತಃ ತಮ್ಮ ತಂಡದ ನಾಯಕನಿಗೆ ಮಾಹಿತಿ ನೀಡದ ಪಿಸಿಬಿ ಕ್ರಿಕೆಟ್‌ ವ್ಯವಹಾರಗಳ ನಿರ್ದೇಶಕ ಉಸ್ಮಾನ್ ವಾಲ್ಹಾ ಅವರ ವಿರುದ್ಧ ಮಂಡಳಿ ಅಧ್ಯಕ್ಷ ಹಾಗೂ ಎಸಿಸಿ ಅಧ್ಯಕ್ಷರೂ ಆಗಿರುವ ಉಸ್ಮಾನ್ ನಕ್ವಿ ಸಿಡಿಮಿಡಿಗೊಂಡಿದ್ದಾರೆ. ಅವರನ್ನು ಕಿತ್ತುಹಾಕುವಂತೆ ಸೋಮವಾರ ರಾತ್ರಿ ಆದೇಶಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.