ADVERTISEMENT

ಟೆಸ್ಟ್ ಸರಣಿ: ತವರು ನೆಲದಲ್ಲಿ ಎಡವಿಬಿದ್ದ ಭಾರತ ತಂಡ!

ಹಾರ್ಮರ್ ಸ್ಪಿನ್ ಎದುರು ಬಸವಳಿದ ಪಂತ್ ಬಳಗ; 25 ವರ್ಷಗಳನಂತರ ಭಾರತದಲ್ಲಿ ಸರಣಿ ಗೆದ್ದ ದಕ್ಷಿಣ ಆಫ್ರಿಕಾ

ಮಧು ಜವಳಿ
Published 26 ನವೆಂಬರ್ 2025, 23:41 IST
Last Updated 26 ನವೆಂಬರ್ 2025, 23:41 IST
ದಕ್ಷಿಣ ಆಫ್ರಿಕಾ ಸ್ಪಿನ್ನರ್ ಸಿಮೊನ್ ಹಾರ್ಮರ್ 
ದಕ್ಷಿಣ ಆಫ್ರಿಕಾ ಸ್ಪಿನ್ನರ್ ಸಿಮೊನ್ ಹಾರ್ಮರ್    

ಗುವಾಹಟಿ: ಭಾರತದ ನೆಲದಲ್ಲಿ ಇಪ್ಪತ್ತೈದು ವರ್ಷಗಳ ನಂತರ ಟೆಸ್ಟ್ ಸರಣಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಭಾವುಕರಾದರು. ಇಲ್ಲಿ ನಡೆದ ಟೆಸ್ಟ್‌ನಲ್ಲಿ 408 ರನ್‌ ಜಯ ಸಾಧಿಸಿದ ಪ್ರವಾಸಿ ಬಳಗವು ಸಂಭ್ರಮಿಸಿತು.

ಇನ್ನೊಂದೆಡೆ ಸ್ಕೋರರ್‌ಗಳೂ ದಾಖಲೆಗಳನ್ನು ಬೊಗಸೆ ತುಂಬ ಮೊಗೆದುಕೊಟ್ಟರು. ತವರು ಮತ್ತು ವಿದೇಶದ ನೆಲದಲ್ಲಿ ಭಾರತ ತಂಡವು ಅತಿ ದೊಡ್ಡ ಅಂತರದಿಂದ ಸೋತ ಪಂದ್ಯ ಇದಾಯಿತು. ಸತತ ಎರಡು ಋತುಗಳಲ್ಲಿ ಪ್ರವಾಸಿ ತಂಡಗಳು ಭಾರತದ ಬಳಗವನ್ನು ಅದರದ್ದೇ ನೆಲದಲ್ಲಿ ಮಣಿಸಿದವು. ತವರಿನಲ್ಲಿ ಆಡಿರುವ ಕಳೆದ ಏಳು ಟೆಸ್ಟ್‌ಗಳಲ್ಲಿ ಐದರಲ್ಲಿ ಸೋಲು. ಹೀಗೆ ಪಟ್ಟಿ ಬೆಳೆಯುತ್ತದೆ. 

ಟೆಸ್ಟ್ ಕ್ರಿಕೆಟ್‌ಗೆ ಉತ್ತಮವಾದ ಪಿಚ್‌ನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದ ಭಾರತ ತಂಡ ಶರಣಾಯಿತು. ಗಂಭೀರ್ ಅವರು ಕೋಚ್ ಸ್ಥಾನಕ್ಕೆ ನೇಮಕವಾದ ನಂತರದ ಅವಧಿಯ ವೈಫಲ್ಯಗಳ ಸಾಲಿಗೆ ಮತ್ತೊಂದು ಹೀನಾಯ ಸೋಲಿನ ಅಧ್ಯಾಯ ಸೇರ್ಪಡೆಯಾಯಿತು. ದಕ್ಷಿಣ ಆಫ್ರಿಕಾ ತಂಡವು 2–0ಯಿಂದ ಸರಣಿಯನ್ನು ಗೆದ್ದು ದಾಖಲೆ ಬರೆಯಿತು. 

ADVERTISEMENT

ಈ ಪಂದ್ಯದ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 27 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಗೆಲುವಿನ ಗುರಿ ತಲುಪಲು ಇನ್ನೂ 522 ರನ್‌ಗಳು (ಗುರಿ; 549 ರನ್) ಬೇಕಾಗಿದ್ದವು. ಕೊನೆಯ ದಿನವಾದ ಬುಧವಾರ ಈ ಗುರಿಯನ್ನು ಸಾಧಿಸಿ ಸರಣಿಯನ್ನು ಸಮಬಲಗೊಳಿಸಿಕೊಳ್ಳುವುದು ಅಸಾಧ್ಯ ಸವಾಲಾಗಿತ್ತು. ಆದರೆ ಪಂದ್ಯದಲ್ಲಿ ಸೋಲುವುದನ್ನು ತಪ್ಪಿಸಿಕೊಳ್ಳಲೂ ಆತಿಥೇಯರಿಗೆ ತೆಂಬಾ ಬವುಮಾ ಬಳಗವು ಆಸ್ಪದ ಕೊಡಲಿಲ್ಲ. ಊಟದ ವಿರಾಮಕ್ಕೂ ಮುನ್ನ 63.5 ಓವರ್‌ಗಳಲ್ಲಿ 140 ರನ್‌ ಗಳಿಸಿದ ಭಾರತ ತಂಡ ಶರಣಾಯಿತು. 

2000ನೇ ಇಸವಿಯಲ್ಲಿ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಸಚಿನ್ ತೆಂಡೂಲ್ಕರ್ ಮುಂದಾಳತ್ವದ ಭಾರತ ತಂಡದ ಎದುರು ಸರಣಿ ಜಯಿಸಿತ್ತು. 

ಭಾರತದ ರವೀಂದ್ರ ಜಡೇಜ (54 ರನ್) ಅವರನ್ನು ಬಿಟ್ಟರೆ  ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ವಾಷಿಂಗ್ಟನ್ ಸುಂದರ್ (16 ರನ್) ಅವರು  ಇನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಎರಡನೇ ಆಟಗಾರ. ಭಾರತದ ಎರಡನೇ ಇನಿಂಗ್ಸ್‌ 266 ನಿಮಿಷಗಳಲ್ಲಿ ಮುಕ್ತಾಯವಾಯಿತು. ವಿಶ್ವದ ಟಿ20 ಪರಿಣತ ಆಟಗಾರರಲ್ಲಿ ಒಬ್ಬರಾಗಿರುವ ಟ್ರಿಸ್ಟನ್ ಸ್ಟಬ್ಸ್‌ ಅವರೊಬ್ಬರೇ ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನಲ್ಲಿ 224 ನಿಮಿಷ ಕ್ರೀಸ್‌ನಲ್ಲಿದ್ದರು. 

ಆಫ್‌ಸ್ಪಿನ್ನರ್ ಸಿಮೊನ್ ಹಾರ್ಮರ್ (37ಕ್ಕೆ6) ಅವರು ಸರಣಿಯಲ್ಲಿ ಒಟ್ಟು 17 ವಿಕೆಟ್ ಪಡೆದರು. ಇದರೊಂದಿಗೆ ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾದರು. 

ಭಾರತದ ಇನಿಂಗ್ಸ್‌ ಅವಲೋಕಿಸಿದರೆ; ಕೆಲವು ಹಂತಗಳಲ್ಲಿ ಅಲ್ಪಸ್ವಲ್ಪ ಪ್ರತಿರೋಧ ಕಂಡುಬಂದಿತು. ಆದರೆ, ದೀರ್ಘ ಮತ್ತು ಗಟ್ಟಿಯಾದ ಜೊತೆಯಾಟಗಳು ಮೂಡಿಬರಲಿಲ್ಲ. 

ಸಾಯಿ ಸುದರ್ಶನ್ ಅವರು ಒಂದು ಬಾರಿ ಜೀವದಾನ ಪಡೆದರು. ಸಾಯಿ ಔಟಾಗಿದ್ದ ಎಸೆತವನ್ನು ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಅವರು ನೋಬಾಲ್ ಹಾಕಿದ್ದರು. ಸಾಯಿ 139 ಎಸೆತಗಳನ್ನು ಆಡಿ 14 ರನ್ ಗಳಿಸಿದರು. 

ಕುಲದೀಪ್ ಯಾದವ್ ಅವರನ್ನು ಆಫ್‌ಸ್ಪಿನ್ನರ್ ಹಾರ್ಮರ್ ಕ್ಲೀನ್‌ಬೌಲ್ಡ್ ಮಾಡಿದರು. ಅದೇ ಓವರ್‌ನಲ್ಲಿ ಧ್ರುವ ಜುರೇಲ್ ಅವರ ವಿಕೆಟ್ ಗಳಿಸುವಲ್ಲಿ ಹಾರ್ಮರ್ ಯಶಸ್ವಿಯಾದರು.  ರಿಷಭ್ ಪಂತ್ ಆಕ್ರಮಣಶೈಲಿ ಹೊಡೆತ ಆಡಲಿಲ್ಲ. ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆಯುವ ದಿಟ್ಟತನ ತೋರಿಸಿದರು. ಆದರೆ ದೊಡ್ಡ ಇನಿಂಗ್ಸ್ ಆಡಲಿಲ್ಲ. ಅವರೂ ಹಾರ್ಮರ್ ಮೋಡಿಗೆ ವಿಕೆಟ್ ಕೊಟ್ಟರು.  

ಎಚ್ಚರಿಕೆ ಮತ್ತು ಏಕಾಗ್ರತೆಯೊಂದಿಗೆ ಆಡುವವರಿಗೆ ಹೆಚ್ಚು ಹೊತ್ತು ನಿಲ್ಲುವ ಅವಕಾಶವನ್ನು ಪಿಚ್ ನೀಡಿತ್ತು. ಆದರೆ, ಬ್ಯಾಟರ್‌ಗಳು ಸಹನೆ ಕಳೆದುಕೊಳ್ಳುವಂತೆ ಮಾಡುವ ತಂತ್ರಗಾರಿಕೆಯನ್ನು ಹಾರ್ಮರ್ ಕೂಡ ಅಚ್ಚುಕಟ್ಟಾಗಿ ಮಾಡಿದರು. ಇದೆಲ್ಲದರ ನಡುವೆ ಜಡೇಜ ಅವರ ಬ್ಯಾಟಿಂಗ್ ಚೇತೋಹಾರಿಯಾಗಿತ್ತು. 

ಟ್ರೋಫಿಯೊಂದಿಗೆ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ
 ರವೀಂದ್ರ ಜಡೇಜ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.