ADVERTISEMENT

IND vs WI Test: 500ನೇ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2023, 14:59 IST
Last Updated 21 ಜುಲೈ 2023, 14:59 IST
ಶತಕ ಗಳಿಸಿದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ
ಶತಕ ಗಳಿಸಿದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ   ಚಿತ್ರಕೃಪೆ: @BCCI

ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ವೆಸ್ಟ್‌ ವಿಂಡೀಸ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವಾಡಿದ 500ನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಈ ಪಂದ್ಯವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಣ ನೂರನೇ ಮುಖಾಮುಖಿಯೂ ಹೌದು.

ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಗಳಿಸಿತ್ತು. 87 ರನ್ ಕಲೆಹಾಕಿದ್ದ ವಿರಾಟ್‌ ಮತ್ತು 36 ರನ್ ಗಳಿಸಿದ್ದ ರವೀಂದ್ರ ಜಡೇಜ ಕ್ರೀಸ್‌ನಲ್ಲಿದ್ದರು.

ADVERTISEMENT

ಎರಡನೇ ದಿನ ಬ್ಯಾಟಿಂಗ್‌ ಮುಂದುವರಿಸಿದ ಈ ಇಬ್ಬರು ಕ್ರಮವಾಗಿ ಶತಕ ಮತ್ತು ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಟೀಂ ಇಂಡಿಯಾ ಸದ್ಯ 4 ವಿಕೆಟ್‌ ನಷ್ಟಕ್ಕೆ 330 ರನ್ ಕಲೆಹಾಕಿದೆ.

196 ಎಸೆತಗಳನ್ನು ಎದುರಿಸಿರುವ ವಿರಾಟ್‌ ಕೊಹ್ಲಿ 11 ಬೌಂಡರಿ ಸಹಿತ 117 ರನ್ ಗಳಿಸಿದ್ದಾರೆ. ಜಡೇಜ 115 ಎಸೆತಗಳಲ್ಲಿ 52 ರನ್ ಗಳಿಸಿ ಆಡುತ್ತಿದ್ದಾರೆ. ಈ ಜೋಡಿ ಮುರಿಯದ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 152 ರನ್ ಕಲೆಹಾಕಿದೆ.

ಮೊದಲ ದಿನ, ಆರಂಭಿಕ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮ (80) ಮತ್ತು ಯಶಸ್ವಿ ಜೈಸ್ವಾಲ್ (57) ಅರ್ಧಶತಕ ಗಳಿಸಿದರೆ, ಶುಭಮನ್ ಗಿಲ್‌ (10) ಮತ್ತು ಅಜಿಂಕ್ಯ ರಹಾನೆ (8) ವೈಫಲ್ಯ ಅನುಭವಿಸಿದರು.

ಸರಣಿ ಕ್ಲೀನ್‌ಸ್ವೀಪ್‌ ಯೋಜನೆಯಲ್ಲಿ ರೋಹಿತ್ ಪಡೆ

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಿವೆ. ಮೊದಲ ಪಂದ್ಯವನ್ನು ಗೆದ್ದಿರುವ ರೋಹಿತ್‌ ಬಳಗ ಈ ಪಂದ್ಯವನ್ನೂ ಜಯಿಸಿ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಇರಾದೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.