ADVERTISEMENT

IND vs ZIM 2nd ODI: ಸಂಜು ಸ್ಯಾಮ್ಸನ್ ಮಿಂಚು- ಭಾರತಕ್ಕೆ ಸರಣಿ ಜಯ

ಆತಿಥೇಯ ಜಿಂಬಾಬ್ವೆಗೆ ಮತ್ತೆ ನಿರಾಸೆ: ಸೀನ್ ವಿಲಿಯಮ್ಸ್‌ ಉತ್ತಮ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 14:01 IST
Last Updated 20 ಆಗಸ್ಟ್ 2022, 14:01 IST
ಹರಾರೆಯಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಪಂದ್ಯದಲ್ಲಿ ಭಾರತದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಖರಿ  –ಎಪಿ/ಪಿಟಿಐ ಚಿತ್ರ
ಹರಾರೆಯಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಪಂದ್ಯದಲ್ಲಿ ಭಾರತದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಖರಿ  –ಎಪಿ/ಪಿಟಿಐ ಚಿತ್ರ   

ಹರಾರೆ: ಶಿಸ್ತಿನ ವಿಕೆಟ್‌ಕೀಪಿಂಗ್ ಹಾಗೂ ಮಿಂಚಿನ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ಆಟದಿಂದ ಭಾರತ ತಂಡವು ಜಿಂಬಾಬ್ವೆ ಎದುರು ಜಯಭೇರಿ ಬಾರಿಸಿತು. ಏಕದಿನ ಕ್ರಿಕೆಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ ಮೈದಾನದಲ್ಲಿ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು.

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಾರ್ದೂಲ್ (38ಕ್ಕೆ3) ಅಮೋಘ ಬೌಲಿಂಗ್ ಮುಂದೆ ಜಿಂಬಾಬ್ವೆ ತಂಡವು 38.1 ಓವರ್‌ಗಳಲ್ಲಿ 161 ರನ್‌ ಗಳಿಸಿತು. ಮಧ್ಯಮಕ್ರಮಾಂಕದ ಬ್ಯಾಟರ್‌ಗಳಾದ ಸೀನ್ ವಿಲಿಯಮ್ಸ್ (42 ರನ್) ಹಾಗೂ ರಿಯಾನ್ ಬರ್ಲ್ (ಔಟಾಗದೆ 39) ಉಪಯುಕ್ತ ಕಾಣಿಕೆ ನೀಡಿದರು.

ADVERTISEMENT

ಈ ಸಾಧಾರಣ ಗುರಿಯನ್ನು ಭಾರತ ತಂಡವು 25.4 ಓವರ್‌ಗಳಲ್ಲಿ ಮುಟ್ಟಿತು. 5 ವಿಕೆಟ್‌ಗಳನ್ನು ಕಳೆದುಕೊಂಡು 167 ರನ್ ಗಳಿಸಿತು. ಸಂಜು ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳ ಕ್ಯಾಚ್ ಪಡೆದರು. ಒಂದು ರನ್‌ಔಟ್‌ಗೂ ಜೊತೆ ನೀಡಿದರು. ಮಿಂಚಿನ ಬ್ಯಾಟಿಂಗ್ ಮಾಡಿದ ಸಂಜು (ಔಟಾಗದೆ 43) ದೀಪಕ್ ಹೂಡಾ ಜೊತೆಗೂಡಿ ಐದನೇ ವಿಕೆಟ್‌ಗೆ 56 ರನ್‌ಗಳನ್ನು ಸೇರಿಸಿದರು. 110.26ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ ಸಂಜು, ನಾಲ್ಕು ಸಿಕ್ಸರ್ ಸಿಡಿಸಿದರು.

ಅವರು ಕ್ರೀಸ್‌ಗೆ ಬಂದ ಹೊತ್ತಿನಲ್ಲಿ ತಂಡವು 97 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು.ನಾಯಕ ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಶಿಖರ್ ಧವನ್ ಜೊತೆಗೆ ಇನಿಂಗ್ಸ್ ಆರಂಭಿಸಿದರು. ಆದರೆ, ಕೇವಲ ಒಂದು ರನ್ ಗಳಿಸಿದ ಅವರು ನಿಯಾಚಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಶಿಖರ್ ಜೊತೆಗೂಡಿದ ಶುಭಮನ್ ಗಿಲ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 42 ರನ್‌ ಸೇರಿಸಿದರು. ಏಳನೇ ಓವರ್‌ನಲ್ಲಿ ತನಾಕಾ ಚಿವಾಂಗ್ ಎಸೆತದಲ್ಲಿ ಶಿಖರ್ (33; 21ಎ) ಔಟಾದರು. ಇಶಾನ್ ಕಿಶನ್ (6; 13ಎ) ಲಯ ಕಂಡುಕೊಳ್ಳಲು ಪರದಾಡಿದರು. ಇದರ ಲಾಭ ಪಡೆದ ಮಧ್ಯಮವೇಗಿ ಲೂಕ್ ಜಾಂಗ್ವೆ ಮೇಲುಗೈ ಸಾಧಿಸಿದರು. 12ನೇ ಓವರ್‌ನಲ್ಲಿ ಇಶಾನ್ ಹಾಗೂ 14ನೇ ಓವರ್‌ನಲ್ಲಿ ಶುಭಮನ್ ವಿಕೆಟ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.