ADVERTISEMENT

ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಹೋರಾಟ

ಇಂದು ಆಸ್ಟ್ರೇಲಿಯಾ ‘ಎ’ ಎದುರು ಎರಡನೇ ಏಕದಿನ ಕ್ರಿಕೆಟ್‌ ಪಂದ್ಯ

ಪಿಟಿಐ
Published 16 ಅಕ್ಟೋಬರ್ 2018, 15:25 IST
Last Updated 16 ಅಕ್ಟೋಬರ್ 2018, 15:25 IST

ಮುಂಬೈ: ಮೊದಲ ಪಂದ್ಯದಲ್ಲಿ ನಿರಾಸೆ ಕಂಡಿದ್ದ ಭಾರತ ಮಹಿಳಾ ‘ಎ’ ತಂಡದವರು ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಹೋರಾಟದಲ್ಲಿ ಆಸ್ಟ್ರೇಲಿಯಾ ‘ಎ’ ತಂಡಕ್ಕೆ ತಿರುಗೇಟು ನೀಡಲು ಕಾತರರಾಗಿದ್ದಾರೆ.

ಸರಣಿ ಜಯದ ಕನಸು ಜೀವಂತವಾಗಿ ಇಟ್ಟುಕೊಳ್ಳಬೇಕಾದರೆ ಪೂನಮ್‌ ರಾವತ್‌ ಪಡೆ ಬುಧವಾರ ನಡೆಯುವ ‍ಪೈಪೋಟಿಯಲ್ಲಿ ಎದುರಾಳಿಗಳಿಗೆ ಸೋಲುಣಿಸಲೇಬೇಕು. ಹೀಗಾಗಿ ಆತಿಥೇಯರ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ.

ಬಾಂದ್ರಾ ಕುರ್ಲಾ ಸಂಕೀರ್ಣದ ಮೈದಾನದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ 91ರನ್‌ಗಳಿಂದ ಗೆದ್ದಿದ್ದ ಆಸ್ಟ್ರೇಲಿಯಾದ ವನಿತೆಯರು ಮೂರು ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಗಳಿಸಿದ್ದಾರೆ.

ADVERTISEMENT

‌ಹಿಂದಿನ ಹಣಾಹಣಿಯಲ್ಲಿ ಭಾರತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ವೈಫಲ್ಯ ಕಂಡಿತ್ತು. ನಾಯಕಿ ಪೂನಮ್‌ ಶೂನ್ಯಕ್ಕೆ ಔಟಾಗಿದ್ದರು. ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಸುಷ್ಮಾ ವರ್ಮಾ ಮತ್ತು ಮೋನಾ ಮೆಷ್ರಮ್‌ ಅವರೂ ರನ್‌ ಗಳಿಸಲು ಪರದಾಡಿದ್ದರು. ಇವರು ಲಯ ಕಂಡುಕೊಳ್ಳುವುದು ಅಗತ್ಯ.

ಬೌಲರ್‌ಗಳಾದ ಶಿಖಾ ಪಾಂಡೆ, ಕವಿತಾ, ಪ್ರೀತಿ ಬೋಸ್‌ ಮತ್ತು ರೀಮಾಲಕ್ಷ್ಮಿ ಎಕ್ಕಾ ಅವರು ಆಸ್ಟ್ರೇಲಿಯಾದ ಆಟಗಾರ್ತಿಯರನ್ನು ಬೇಗನೆ ಕಟ್ಟಿಹಾಕಬೇಕಿದೆ. ರಾಜೇಶ್ವರಿ ಗಾಯಕವಾಡ, ಸುಶ್ರೀ ದಿವ್ಯದರ್ಶಿನಿ ಅವರೂ ಜವಾಬ್ದಾರಿ ಅರಿತು ಆಡಬೇಕಿದೆ.

ಆಸ್ಟ್ರೇಲಿಯಾ ತಂಡ ಎರಡನೇ ಹೋರಾಟದಲ್ಲೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಹವಣಿಸುತ್ತಿದೆ. ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ತಹಿಲಾ ಮೆಕ್‌ಗ್ರಾಥ್‌, ಹೀಥರ್‌ ಗ್ರಹಾಂ ಮತ್ತು ನವೊಮಿ ಸ್ಟಾಲೆನ್‌ಬರ್ಗ್‌ ಅವರು ಮತ್ತೊಮ್ಮೆ ರನ್‌ ಮಳೆ ಸುರಿಸಲು ಕಾಯುತ್ತಿದ್ದಾರೆ.

ನಾಯಕಿ ಮಾಲಿ ಸ್ಟ್ರಾನೊ, ಕ್ಲೋಯೆ ಪಿಪಾರೊ ಮತ್ತು ಜಾರ್ಜಿಯಾ ರೆಡ್‌ಮೆಯ್ನ್‌ ಅವರೂ ಅಬ್ಬರದ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಡುವ ವಿಶ್ವಾಸದಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಪ್ರವಾಸಿ ತಂಡ ಬಲಿಷ್ಠವಾಗಿದೆ.

ಆರಂಭ: ಬೆಳಿಗ್ಗೆ 9ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.