ADVERTISEMENT

ಆಫ್ರಿಕಾ ಎ ವಿರುದ್ಧ 255 ರನ್ ಕಲೆಹಾಕಿದ ಭಾರತ ಎ: ಧ್ರುವ ಜುರೇಲ್ ದಿಟ್ಟ ಶತಕ

ಗಿರೀಶದೊಡ್ಡಮನಿ
Published 6 ನವೆಂಬರ್ 2025, 18:54 IST
Last Updated 6 ನವೆಂಬರ್ 2025, 18:54 IST
<div class="paragraphs"><p>ಧ್ರುವ ಜುರೇಲ್ ಬ್ಯಾಟಿಂಗ್‌ ವೈಖರಿ</p></div>

ಧ್ರುವ ಜುರೇಲ್ ಬ್ಯಾಟಿಂಗ್‌ ವೈಖರಿ

   

ಕೃಪೆ: ಪಿಟಿಐ

ಬೆಂಗಳೂರು: ಗುರುವಾರ ಬೆಳಗಿನ ಅಹ್ಲಾದಕರ ವಾತಾವರಣದಲ್ಲಿ ಆರಂಭಿಕ ಆಘಾತ ಅನುಭವಿಸಿದ ಭಾರತ ಎ ತಂಡದ ಕುಸಿತ ತಡೆಯೊವಲ್ಲಿ ಧ್ರುವ ಜುರೇಲ್ ಯಶಸ್ವಿಯಾದರು. 

ADVERTISEMENT

ಇಲ್ಲಿ ಆರಂಭವಾದ ‘ಟೆಸ್ಟ್’ (ಚತುರ್ಥ ದಿನ) ಪಂದ್ಯದ ಮೊದಲ ದಿನದಾಟದಲ್ಲಿ 86 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡಕ್ಕೆ ಧ್ರುವ (ಅಜೇಯ 132, 175ಎ, 4X12, 6X4) ಅವರು ತಮ್ಮ ಅಮೋಘ ಶತಕದ ಮೂಲಕ ಆಸರೆಯಾದರು. ದಿನದಾಟದ ಮುಕ್ತಾಯಕ್ಕೆ ಸರಿಯಾಗಿ ಭಾರತ  ಎ ತಂಡವು 77.1 ಓವರ್‌ಗಳಲ್ಲಿ 255 ರನ್ ಗಳಿಸಿತು. ಪ್ರವಾಸಿ ತಂಡದ ಟಿಯಾನ್ ವ್ಯಾನ್ ವುರೆನ್ (52ಕ್ಕೆ4) ಪರಿಣಾಮಕಾರಿ ದಾಳಿ ನಡೆಸಿದರು. 

ಈ ಪಂದ್ಯದಲ್ಲಿ ಕಣಕ್ಕಿಳಿದ ಹನ್ನೊಂದರ ಬಳಗದಲ್ಲಿ ಅಭಿಮನ್ಯು ಈಶ್ವರನ್ ಮತ್ತು ಹರ್ಷ ದುಬೆ ಬಿಟ್ಟರೆ ಉಳಿದೆಲ್ಲರೂ ಭಾರತ ತಂಡದಲ್ಲಿ ಆಡಿದ ಅನುಭವಿಗಳು. ಆದರೆ ಇದರಲ್ಲಿ ಯಶಸ್ವಿಯಾಗಿ ತಂಡಕ್ಕೆ ಬಲ ತುಂಬಿದವರು ಜುರೇಲ್ ಮಾತ್ರ. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾದ ನಿರ್ಧಾರ ಆರಂಭದಲ್ಲಿಯೇ ಫಲ ನೀಡಿತು. ಹಸಿರು ಇದ್ದ ಪಿಚ್‌ ವೇಗಿಗಳಿಗೆ ನೆರವು ನೀಡಿತು. ಆತಿಥೇಯ ತಂಡವು ಮೊದಲ ಅವಧಿಯಲ್ಲಿಯೇ 55ಕ್ಕೆ4 ವಿಕೆಟ್ ಕಳೆದುಕೊಂಡಿತು. 

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನಾಯಕ ರಿಷಭ್ ಪಂತ್ ಜೊತೆಗೆ ಸೇರಿದ ಧ್ರುವ ವಿಕೆಟ್ ಕುಸಿತಕ್ಕೆ ತಡೆಯೊಡ್ಡಿದರು. ರಿಷಭ್ ಯಥಾಪ್ರಕಾರ ತಮ್ಮದೇ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಮಾಡಿದರು. ಮುನ್ನುಗ್ಗಿ ಸಿಕ್ಸರ್ ಎತ್ತಿದರು. ಕ್ರೀಸ್‌ನಲ್ಲಿ ಮಲಗಿ ರಿವರ್ಸ್ ಸ್ಕೂಪ್ ಬೌಂಡರಿ ಗಿಟ್ಟಿಸಿದರು. ಅವರು ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಬೌಂಡರಿಲೈನ್‌ ಬಳಿಯೇ ಹೆಚ್ಚು ಫೀಲ್ಡ್‌ಗಳೂ ನಿಯೋಜಿತರಾಗಿದ್ದರು. ಊಟದ ವಿರಾಮದ ನಂತರ ಮೊರೆಕಿ ಬೌಲಿಂಗ್‌ನಲ್ಲಿ ಫೀಲ್ಡರ್ ಏಕರ್‌ಮನ್‌ ಅವರಿಗೆ ಕ್ಯಾಚಿತ್ತರು. 

ಆಗ ಇಡೀ ಇನಿಂಗ್ಸ್‌ ಹೊಣೆ ಹೊತ್ತ ಧ್ರುವ  ಕೆಳಕ್ರಮಾಂಕದ ಆಟಗಾರರೊಂದಿಗೆ ಜೊತೆಯಾಟ ಕಟ್ಟಿದರು. ಮಧ್ಯಾಹ್ನ ಒಂದೂವರೆ ಸುಮಾರಿಗೆ ಮೋಡ ಕವಿದ ವಾತಾವರಣದಲ್ಲಿ ಬೆಳಗಿದ ಫ್ಲಡ್‌ಲೈಟ್‌ ಬೆಳಕಲ್ಲಿ ಧ್ರುವ ಅವರ ಆಟ ಅಪ್ಯಾಯಮಾನವಾಗಿತ್ತು. ಚೆಂದದ ಡ್ರೈವ್, ಸ್ವೀಪ್‌ಗಳ ಆಟವಾಡಿದರು.  ಅವರು ಕುಲದೀಪ್ ಯಾದವ್ ಅವರೊಂದಿಗಿನ ಜೊತೆಯಾಟದಲ್ಲಿ 79 ರನ್ ಸೇರಿಸಿದರು. ಕುಲದೀಪ್ ರನೌಟ್ ಆಗುವುದರೊಂದಿಗೆ ಜೊತೆಯಾಟ ಮುರಿಯಿತು. 

ಎಡವಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು 

ಪಂದ್ಯದ ಎರಡನೇ ಓವರ್‌ನಲ್ಲಿ ಟಿಶೆಪೊ ಮೊರೆಕಿ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಅಭಿಮನ್ಯು ಈಶ್ವರನ್ ಬಿದ್ದರು. ಖಾತೆ ತೆರೆಯಲೂ ಅವರಿಗೆ ಸಾಧ್ಯವಾಗಲಿಲ್ಲ. ಕೆ.ಎಲ್. ರಾಹುಲ್ ಮತ್ತು ಸಾಯಿ ಸುದರ್ಶನ್ ತಾಳ್ಮೆಯ ಆಟವಾಡಿ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಚುರುಕಾಗಿ ತಿರುವು ಪಡೆದು ಬರುತ್ತಿದ್ದ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 35 ರನ್ ಸೇರಿಸಿದರು. ಆದರೆ 16ನೇ ಓವರ್‌ನಲ್ಲಿ ವ್ಯಾನ್ ವುರನ್ ಎಸೆತವನ್ನು ಆಡುವ ಭರದಲ್ಲಿ ರಾಹುಲ್ ಕಾನರ್ ಎಸ್ತುಝಿಯಾನ್‌ಗೆ ಕ್ಯಾಚಿತ್ತರು. 

ನಂತರದ ಓವರ್‌ನಲ್ಲಿ ಸ್ಪಿನ್ನರ್ ಪ್ರೆರೆಲನ್ ಸುಬ್ರಾಯನ್ ಬೌಲಿಂಗ್‌ನಲ್ಲಿ ಸಾಯಿ ಸುದರ್ಶನ್ (17 ರನ್) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ದೇವದತ್ತ ಪಡಿಕ್ಕಲ್ (5 ರನ್) ಮತ್ತೊಮ್ಮೆ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 77.1 ಓವರ್‌ಗಳಲ್ಲಿ 255 (ಕೆ.ಎಲ್. ರಾಹುಲ್ 19, ಸಾಯಿ ಸುದರ್ಶನ್ 17, ರಿಷಭ್ ಪಂತ್ 24, ಧ್ರುವ ಜುರೇಲ್ ಔಟಾಗದೇ 132, ಹರ್ಷ ದುಬೆ 14, ಕುಲದೀಪ್ ಯಾದವ್ 20, ಮೊಹಮ್ಮದ್ ಸಿರಾಜ್ 15, ಟಿಶೆಪೊ ಮೊರೆಕಿ 52ಕ್ಕೆ2, ಪೆರಲಾನ್ ಸುಬೆರಾಯನ್ 73ಕ್ಕೆ2, ಟಿಯಾನ್ ವ್ಯಾನ್ ವುರನ್ 52ಕ್ಕೆ4) ವಿರುದ್ಧ ದಕ್ಷಿಣ ಆಫ್ರಿಕಾ ಎ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.