ಭಾರತ ಕ್ರಿಕೆಟ್ ತಂಡದ ಆಟಗಾರರು
–ಬಿಸಿಸಿಐ ಚಿತ್ರ
ಬ್ರಿಸ್ಬೇನ್: ಹೊರದೇಶದಲ್ಲಿ ಮತ್ತೊಂದು ಸರಣಿ ಗೆಲುವಿನ ಹೊಸ್ತಿಲಲ್ಲಿರುವ ಭಾರತ ತಂಡದ ಗಮನ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವುದು. ಶನಿವಾರ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಇದಕ್ಕೆ ಒಳ್ಳೆಯ ಅವಕಾಶ ಒದಗಿಸಿದೆ.
ಭಾರತ ಈಗಾಗಲೇ 2–1 ಅಂತರದಲ್ಲಿ ಸುರಕ್ಷಿತ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 17 ವರ್ಷಗಳಿಂದ ಒಮ್ಮೆಯೂ ಸರಣಿ ಸೋಲದ ದಾಖಲೆ ಕಾಪಾಡಿಕೊಂಡು ಬಂದಿದೆ. ಸೂರ್ಯಕುಮಾರ್ ಯಾದವ್ ಪಡೆ ಈಗ ಸರಣಿ ಗೆಲುವಿನ ಅವಕಾಶ ಹೊಂದಿದೆ.
ಸೂರ್ಯ ಮತ್ತು ಉಪನಾಯಕ ಶುಭಮನ್ ಗಿಲ್ ಅವರ ಬ್ಯಾಟಿಂಗ್ ನಿರ್ವಹಣೆ ಮೇಲೆ ಹೆಚ್ಚಿನ ಗಮನವಿಡಲಾಗಿದೆ. ಆಸ್ಟ್ರೇಲಿಯಾ ತಂಡವು ಭಾರತ ಸ್ಪಿನ್ ಸವಾಲಿಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಮುಂದಿನ ವರ್ಷದ ಆರಂಭದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಸಜ್ಜಾಗುವ ದೃಷ್ಟಿಯಿಂದಲೂ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಮಹತ್ವದ್ದು.
ಈ ಹಿಂದಿನ ಪಂದ್ಯದಲ್ಲಿ ಗಿಲ್ ಅವರ ಆಟದಿಂದ ಭಾರತ ಒಂದು ಹಂತದಲ್ಲಿ 2 ವಿಕೆಟ್‌ಗೆ 121 ರನ್‌ಗಳ ಉತ್ತಮ ಆರಂಭ ಪಡೆದಿತ್ತು. ಆದರೆ 15 ರನ್‌ಗಳ ಅಂತರದಲ್ಲಿ 4 ವಿಕೆಟ್‌ಗಳು ಪತವಾದವು. ಗಿಲ್ ಈ ಹಿಂದಿನ ಏಳು ಇನಿಂಗ್ಸ್‌ಗಳಿಂದ ಅರ್ಧ ಶತಕ ಗಳಿಸಿಲ್ಲ. ಆದರೆ ಗುರುವಾರದ ಪಂದ್ಯದಲ್ಲಿ ಅವರು ಗಳಿಸಿದ 46 ರನ್‌ಗಳು ಲಯಕ್ಕೆ ಮರಳುವ ಸಂಕೇತಗಳನ್ನು ನೀಡಿದೆ.
ಸೂರ್ಯಕುಮಾರ್ ತಮ್ಮ ಉತ್ತಮ ಆಟದ ತುಣುಕನ್ನಷ್ಟೇ ಪ್ರದರ್ಶಿಸಿದ್ದಾರೆ. ಅವರೂ ಉತ್ತಮ ಆರಂಭದ ಲಾಭ ಪಡೆಯಲಾಗದೇ ಪರದಾಡಿದ್ದಾರೆ. ತಿಲಕ್ ವರ್ಮಾ ಸಹ ಎಂದಿನ ಲಯದಲ್ಲಿಲ್ಲ. ಕೊನೆಯ ಮೂರು ಇನಿಂಗ್ಸ್‌ಗಳಲ್ಲಿ ಅವರ ಗಳಿಕೆ 0, 29 ಮತ್ತು 5.
ಸಂಜು ಬದಲು ಆಡುತ್ತಿರುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮೇಲೂ ಒತ್ತಡವಿದೆ. ಅವರು ಅವಕಾಶದ ಸದುಪಯೋಗ ಮಾಡಿಲ್ಲ. ಅಭಿಷೇಕ್ ಶರ್ಮಾ ತಮ್ಮ ಹೊಣೆಗೆ ತಕ್ಕಂತೆ ಆಡಿದ್ದಾರೆ. ಕೆಳಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಉಪಯುಕ್ತ ಆಟವಾಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ನಿರಾಶೆಗೊಳಿಸಿಲ್ಲ. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿರುವ ಸ್ಪಿನ್ ವಿಭಾಗವೂ ತಮ್ಮ ಹೊಣೆಯನ್ನು ನಿಭಾಯಿಸಿದೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಉಪಯುಕ್ತ ಆಲ್‌ರೌಂಡ್ ಆಟವಾಡಿದ್ದಾರೆ.
ಭಾರತದ ಸ್ಪಿನ್ ದಾಳಿಯೆದುರು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ದೌರ್ಬಲ್ಯ ಬಯಲಾಗಿದೆ. ವರುಣ್, ಅಕ್ಷರ್ ಮತ್ತು ಸುಂದರ್ ಸೇರಿಕೊಂಡು ನಾಲ್ಕನೇ ಪಂದ್ಯದಲ್ಲಿ 6 ವಿಕೆಟ್ ಹಂಚಿಕೊಂಡಿದ್ದರು.
ಆತಿಥೇಯ ತಂಡದ ಬ್ಯಾಟಿಂಗ್, ನಾಯಕ ಮಿಚೆಲ್ ಮಾರ್ಷ್, ಸ್ಟೊಯಿನಿಸ್ ಮತ್ತು ಟಿಮ್ ಡೇವಿಡ್ ಅವರನ್ನೇ ಬಹಳವಾಗಿ ನೆಚ್ಚಿಕೊಂಡಿದೆ. ಭಾರತ ಎದುರು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿರುವ ಟ್ರಾವಿಸ್ ಹೆಡ್ ಗೈರು ಕೂಡ ಕಾಂಗರೂ ಪಡೆಯನ್ನು ಕಾಡುತ್ತಿದೆ. ಎರಡು ದಿನಗಳ ಹಿಂದೆ ಗೋಲ್ಡ್‌ಕೋಸ್ಟ್‌ನಲ್ಲಿ ತಂಡ 168ರ ಸಾಧಾರಣ ಮೊತ್ತ ಕೂಡ ಬೆನ್ನಟ್ಟಲು ವಿಫಲವಾಗಿತ್ತು.
ಜೋಶ್ ಹ್ಯಾಜಲ್‌ವುಡ್ ಅವರ ಅನುಪಸ್ಥಿತಿ ತಂಡದ ಬೌಲಿಂಗ್ ದಾಳಿಯನ್ನು ದುರ್ಬಲಗೊಳಿಸಿದೆ. ಹೀಗಾಗಿ ನಥಾನ್ ಎಲ್ಲಿಸ್ ಮತ್ತು ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಅವರ ಮೇಲೆ ಹೊಣೆ ಹೆಚ್ಚಿದೆ. ತಂಡವು ಭರವಸೆಯ ವೇಗಿ ಮಹ್ಲಿ ಬಿಯರ್ಡ್‌ಮನ್ ಅವರಿಗೆ ಅಂತಿಮ ಪಂದ್ಯದಲ್ಲಿ ಪದಾರ್ಪಣೆಯ ಅವಕಾಶ ನೀಡಬಹುದು.
ಪಂದ್ಯ ಆರಂಭ: ಮಧ್ಯಾಹ್ನ 1.45
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.