ADVERTISEMENT

ಆಸೀಸ್‌ ವಿರುದ್ಧ ನಾಲ್ಕನೇ ಟಿ20 ಪಂದ್ಯ: ದೊಡ್ಡ ಇನಿಂಗ್ಸ್ ನಿರೀಕ್ಷೆಯಲ್ಲಿ ಗಿಲ್

ಪಿಟಿಐ
Published 5 ನವೆಂಬರ್ 2025, 13:52 IST
Last Updated 5 ನವೆಂಬರ್ 2025, 13:52 IST
   

ಕರಾರ (ಗೋಲ್ಡ್‌ಕೋಸ್ಟ್‌): ಭಾರತ ತಂಡವು ಗುರುವಾರ ಆರಂಭವಾಗಲಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಹುಮ್ಮಸ್ಸಿನಿಂದ ಕಣಕ್ಕಿಳಿಯಲಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸುವ ತವಕಲ್ಲಿದೆ. ಉಪ ನಾಯಕ ಶುಭಮನ್ ಗಿಲ್‌ ಅವರೂ ದೊಡ್ಡ ಇನಿಂಗ್ಸ್‌ನ ನಿರೀಕ್ಷೆಯಲ್ಲಿದ್ದಾರೆ.

ಐದು ಪಂದ್ಯಗಳ ಸರಣಿ ಸದ್ಯ 1–1 ಸಮಬಲವಾಗಿದೆ. ಮೊದಲ ಪಂದ್ಯ ಮಳೆಯ ಪಾಲಾಗಿತ್ತು. ಅತ್ಯುತ್ತಮ ಲಯದಲ್ಲಿರುವ ವೇಗದ ಬೌಲರ್ ಜೋಶ್‌ ಹ್ಯಾಜಲ್‌ವುಡ್‌ ಅವರ ಅನುಪಸ್ಥಿತಿ ಭಾರತ ತಂಡಕ್ಕೆ ನೆರವಾಗಿತ್ತು. ಆಸ್ಟ್ರೇಲಿಯಾ ತಂಡವು 186 ರನ್‌ಗಳ ಉತ್ತಮ ಮೊತ್ತ ರಕ್ಷಿಸಲು ವಿಫಲವಾಗಿತ್ತು. ಆ್ಯಷಸ್‌ಗೆ ಸಜ್ಜಾಗಲು ಅವರನ್ನು ಸರಣಿಯ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಆಯ್ಕೆ ಮಾಡಲಾಗಿತ್ತು.

ಇನ್ನೊಬ್ಬ ಪ್ರಮುಖ ಆಟಗಾರ ಟ್ರಾವಿಡ್‌ ಹೆಡ್ ಅವರು ಆ್ಯಷಸ್‌ ಸರಣಿಗೆ ಸಿದ್ಧರಾಗಲು ಶೆಫೀಲ್ಡ್ ಶೀಲ್ಡ್ ಸರಣಿಯಲ್ಲಿ ಆಡಲಿರುವ ಕಾರಣ ಅವರೂ ನಾಲ್ಕನೇ ಪಂದ್ಯಕ್ಕೆ ಅಲಭ್ಯರಾಗಿದ್ದು, ಆತಿಥೇಯ ತಂಡ ಇನ್ನಷ್ಟು ದುರ್ಬಲವಾಗಿದೆ.

ADVERTISEMENT

ಹೀಗಾಗಿ ಭಾರತಕ್ಕೆ ಸರಣಿಯಲ್ಲಿ 2–1 ಮುನ್ನಡೆ ಪಡೆಯಲು ಸುವರ್ಣಾವಕಾಶವಿದೆ. ಅಂತಿಮ ಪಂದ್ಯ ಬ್ರಿಸ್ಬೇನ್‌ನ ಗ್ಯಾಬಾದಲ್ಲಿ ನಡೆಯಲಿದೆ. 

ಈ ಹಿಂದಿನ ಪಂದ್ಯದಲ್ಲಿ ಭಾರತ ಎಂಟನೆ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗೆ ಅವಕಾಶ ನೀಡಿದ್ದು, ಸಂಯೋಜನೆಗೆ ತಕ್ಕಂತೆ ಆಡಿತ್ತು. ಆದರೆ ತಂಡ ಗಿಲ್‌ ಅವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷಿಸುತ್ತಿದೆ. ಕಳೆದ ಆರು ಪಂದ್ಯಗಳಲ್ಲಿ ಅವರು ಒಂದೂ ಅರ್ಧ ಶತಕ ಗಳಿಸಿಲ್ಲ. ಈ ಪ್ರವಾಸದಲ್ಲಿ ಏಕದಿನ ಪಂದ್ಯಗಳಿಂದ ಇಲ್ಲಿಯವರೆಗೆ ಅವರ ಗಳಿಕೆ... 10, 9, 24, ಔಟಾಗದೇ 37, 5 ಮತ್ತು 15.

ಕೆನ್‌ಬೆರಾದಲ್ಲಿ ನಡೆದ ಮೊದಲ ಪಂದ್ಯದಲ್ಲ ಅವರು ಉತ್ತಮ ಲಯದಲ್ಲಿದ್ದಂತೆ ಕಂಡಿತ್ತು. ಅಲ್ಲಿ ನಾಯಕ ಸೂರ್ಯಕುಮಾರ್ ಜೊತೆ ಉತ್ತಮ ಆರಂಭ ನೀಡಿದ್ದರು. ಆದರೆ ಮಳೆಯಿಂದಾಗಿ ಆ ಪಂದ್ಯ ಹತ್ತು ಓವರುಗಳ ಮೊದಲೇ ಸ್ಥಗಿತಗೊಂಡಿತ್ತು. ಲಯ ಕಂಡುಕೊಳ್ಳಲು ಯತ್ನಿಸುತ್ತಿರುವ ಗಿಲ್‌ ಅವರು ಬೌನ್ಸ್‌ ಅಂದಾಜಿಸುವಲ್ಲಿ ಎಡವುತ್ತಿದ್ದಾರೆ.

ಆದರೆ ಅಭಿಷೇಕ್ ಶರ್ಮಾ ತಮ್ಮ ಖ್ಯಾತಿಗೆ ತಕ್ಕಂತೆ ಬ್ಯಾಟ್‌ ಬೀಸುತ್ತಿದ್ದಾರೆ. ಒಂದು ಆಕರ್ಷಕ ಅರ್ಧ ಶತಕದೊಂದಿಗೆ ಅವರು ವಿಶ್ವದ ಅಗ್ರಮಾನ್ಯ ಬ್ಯಾಟರ್ ಪಟ್ಟಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಸದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟೆಸ್ಟ್‌ ಸರಣಿಗೆ ಸಜ್ಜಾಗಬೇಕಾಗಿರುವ ಗಿಲ್‌ ಅವರಿಗೆ ವಿಶ್ವಾಸ ಗಳಿಸಲು ಉತ್ತಮ ಇನಿಂಗ್ಸ್‌ ಆಡುವ ಅಗತ್ಯವಿದೆ. ಸಾಧಾರಣ ಫಾರ್ಮ್‌ನಲ್ಲಿರುವ ನಾಯಕ ಸೂರ್ಯ ಅವರೂ ಉತ್ತಮ ಇನಿಂಗ್ಸ್ ಆಡುವ ತವಕದಲ್ಲಿದ್ದಾರೆ.

ಮೂರನೇ ಪಂದ್ಯದಲ್ಲಿ ಅವಕಾಶ ಪಡೆದ ಅರ್ಷದೀಪ್ ಸಿಂಗ್ ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಸಜ್ಜಾಗಲು ಕುಲದೀಪ್ ಯಾದವ್ ಅವರನ್ನು ತವರಿಗೆ ಕಳುಹಿಸಲಾಗಿದೆ. ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಉಪಯುಕ್ತ (49, 23ಎ) ಕಾಣಿಕೆ ನೀಡಿದ್ದರು.

ಆಸ್ಟ್ರೇಲಿಯಾ ತಂಡವು ದೊಡ್ಡ ಮೊತ್ತಕ್ಕೆ ನಾಯಕ ಮಿಚೆಲ್‌ ಮಾರ್ಷ್‌ ಮತ್ತು ಟಿಮ್‌ ಡೇವಿಡ್ ಅವರ ಆಟವನ್ನೇ ಹೆಚ್ಚು ಅವಲಂಬಿಸಿದೆ. ಟ್ರಾವಿಸ್‌ ಹೆಡ್‌ ಗೈರುಹಾಜರಿಯಲ್ಲಿ ಮ್ಯಾಥ್ಯೂ ಶಾರ್ಟ್‌ ಅವರು ಮಾರ್ಷ್ ಜೊತೆ ಇನಿಂಗ್ಸ್ ಆರಂಭಿಸಬಹುದು.

ಅನುಭವಿಗಳಿಲ್ಲದೇ ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ಸ್ವಲ್ಪ ಬಡವಾದಂತೆ ಕಾಣುತ್ತಿದೆ. 

ಪಂದ್ಯ ಆರಂಭ: ಮಧ್ಯಾಹ್ನ 1.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.