ADVERTISEMENT

ಮಹಿಳಾ ವಿಶ್ವಕಪ್: ಭಾರತ – ಬಾಂಗ್ಲಾ ಪಂದ್ಯ ಇಂದು

ಪಿಟಿಐ
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
   

ನವಿ ಮುಂಬೈ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಇದೇ 30ರಂದು ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಇಳಿಯಿವ ಮುನ್ನ ಭಾರತ ತಂಡ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಕೊನೆಯ ಅವಕಾಶ ಭಾನುವಾರ ಒದಗಿದೆ. ಬಾಂಗ್ಲಾದೇಶ ವಿರುದ್ಧ ಇಲ್ಲಿನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯ ಆತಿಥೇಯ ತಂಡಕ್ಕೆ ಈ ನಿಟ್ಟಿನಲ್ಲಿ ನೆರವಾಗಲಿದೆ.

ಈಗ ಆರು ಪಾಯಿಂಟ್ಸ್ ಗಳಿಸಿರುವ ಭಾರತ ಈ ಕೊನೆಯ ಲೀಗ್‌ ಪಂದ್ಯ ಗೆದ್ದರೆ ಒಟ್ಟು ಎಂಟು ಪಾಯಿಂಟ್ಸ್‌ ಗಳಿಸಿದಂತಾಗಲಿದೆ. ಆದರೆ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವನ್ನು (ಈಗಾಗಲೇ 9 ಪಾಯಿಂಟ್ಸ್‌ ಗಳಿಸಿದೆ) ಹಿಂದೆಹಾಕಲು ಆಗುವುದಿಲ್ಲ. ಹೀಗಾಗಿ ಲೀಗ್‌ನಲ್ಲಿ ನಾಲ್ಕನೇ ಸ್ಥಾನ ಬದಲಾಗದು.

ಭಾನುವಾರ ಬೆಳಿಗ್ಗೆ 11 ಗಂಟೆಗೆ ವಿಶಾಖಪಟ್ಟಣದಲ್ಲಿ ಆರಂಭವಾಗುವ ಇನ್ನೊಂದು ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು, ನ್ಯೂಜಿಲೆಂಡ್ ವಿರುದ್ಧ ಆಡಲಿದ್ದು, ಪಾಯಿಂಟ್‌ ಗಳಿಕೆಯನ್ನು 11ಕ್ಕೆ ಏರಿಸಲು ಅವಕಾಶವಿದೆ.

ADVERTISEMENT

ಸೆಮಿಫೈನಲ್ ಸ್ಥಾನ ಅಲುಗಾಡುವ ಹಂತದಲ್ಲಿದ್ದಾಗ ಹರ್ಮನ್‌ಪ್ರೀತ್ ಕೌರ್‌ ಪಡೆ ಅಮೋಘ ಪ್ರದರ್ಶನ ನೀಡಿ, ನ್ಯೂಜಿಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಸ್ಮೃತಿ ಮಂದಾನ (105, 95ಎ) ಮತ್ತು ಪ್ರತಿಕಾ ರಾವಲ್ (122, 135ಎ) ಬಿರುಸಿನ ಶತಕಗಳನ್ನು ಗಳಿಸಿದ್ದರು. ಜೆಮಿಮಾ ಕೂಡ ಅಜೇಯ 76 ರನ್ ಬಾರಿಸಿ ಲಯಕ್ಕೆ ಮರಳಿದ್ದರು.‌

ಬಾಂಗ್ಲಾದೇಶ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಿನಲ್ಲಿದ್ದಾಗ ಎಡವಿ ನಿರಾಸೆ ಅನುಭವಿಸಿತು. ಕೊನೆಯ ಸ್ಥಾನದಲ್ಲೇ ಉಳಿಯಿತು.

ಪಂದ್ಯ ಆರಂಭ: ಮಧ್ಯಾಹ್ನ 3.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.