ADVERTISEMENT

IND vs SA | ‘ಗೌರವ’ ಉಳಿಸಿದ ದಿನೇಶ್, ಆವೇಶ್, ಹಾರ್ದಿಕ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 17:20 IST
Last Updated 17 ಜೂನ್ 2022, 17:20 IST
   

ರಾಜ್‌ಕೋಟ್: ಮಿಂಚಿನ ಅರ್ಧಶತಕ ಗಳಿಸಿದ ದಿನೇಶ್ ಕಾರ್ತಿಕ್ ಮತ್ತು ಶಿಸ್ತಿನ ದಾಳಿ ನಡೆದ ಆವೇಶ್ ಖಾನ್ ನೆರವಿನಿಂದ ಭಾರತ ತಂಡವುಶುಕ್ರವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ 82ರನ್‌ಗಳ ಜಯ ಸಾಧಿಸಿತು.

ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು. ಅದರಿಂದಾಗಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಜಯಿಸುವವರಿಗೆ ಸರಣಿ ಕಿರೀಟ ಒಲಿಯಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅಮೋಘ ಜಯ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ಬಳಗವು ಪುಟಿದೆದ್ದು ಗೆಲುವು ಸಾಧಿಸಿತು.

ADVERTISEMENT

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಿನೇಶ್ ಕಾರ್ತಿಕ್ (55; 27ಎ) ಮತ್ತು ಹಾರ್ದಿಕ್ ಪಾಂಡ್ಯ (46;31ಎ) ಅವರ ಜೊತೆಯಾಟದ ಬಲದಿಂದ ಆತಿಥೇಯ ತಂಡವು 20 ಓವರ್‌ಗಳಲ್ಲಿ 6ಕ್ಕೆ 169 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆವೇಶ್ ಖಾನ್ (18ಕ್ಕೆ4) ತಡೆಯೊಡ್ಡಿದರು. ತೆಂಬಾ ಬವುಮಾ ಬಳಗವು 16.5 ಓವರ್‌ಗಳಲ್ಲಿ 87 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಶಕ್ತಿ ತುಂಬಿದ ದಿನೇಶ್: ಭಾರತ ತಂಡವು 81 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಕಾಲಿಟ್ಟ ದಿನೇಶ್ ಇನಿಂಗ್ಸ್‌ನ ಚಿತ್ರಣವನ್ನೇ ಬದಲಿಸಿದರು. ಈಚೆಗೆ ಐಪಿಎಲ್‌ನಲ್ಲಿ ಸತತವಾಗಿ ಮಿಂಚಿದ್ದ ಅವರು ಇಲ್ಲಿಯೂ ತಮ್ಮ ಅನುಭವಿ ಬ್ಯಾಟಿಂಗ್‌ ಕೌಶಲ ತೋರಿಸಿದರು. 203.70ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. 26 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಡ್ರೈವ್, ಸ್ಕೂ‍ಪ್ ಮತ್ತು ರಿವರ್ಸ್ ಸ್ವೀಪ್‌ಗಳ ಚೆಂದದ ಆಟವಾಡಿದರು. ಅವರೊಂದಿಗೆ ಹಾರ್ದಿಕ್ ಕೂಡ ಬೀಸಾಟವಾಡಿದರು.

ಇದರಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 69 ರನ್‌ಗಳು ತಂಡದ ಖಾತೆ ಸೇರಿದವು. 19ನೇ ಓವರ್‌ನಲ್ಲಿ ಲುಂಗಿ ಗಿಡಿ ಬೌಲಿಂಗ್‌ನಲ್ಲಿ ಹಾರ್ದಿಕ್ ಔಟಾದರು. ಜೊತೆಯಾಟವೂ ಮುರಿದುಬಿತ್ತು. ಕೊನೆಯ ಓವರ್‌ನಲ್ಲಿ ದಿನೇಶ್ ಕೂಡ ಔಟಾದರು. ಐದನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ 65 ರನ್‌ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.