ನವದೆಹಲಿ: ಭಾರತ ಶ್ರವಣದೋಷವುಳ್ಳ ಆಟಗಾರರ ತಂಡ ಏಕದಿನ ಕ್ರಿಕೆಟ್ ಸರಣಿಯನ್ನು ಶ್ರೀಲಂಕಾ ತಂಡವನ್ನು 5–0 ಯಿಂದ ಸೋಲಿಸಿತು.
ಡಿಸೆಂಬರ್ 2ರಿಂದ 8ರವರೆಗೆ ನಡೆದ ಏಕದಿನ ಸರಣಿ ನಡೆಯಿತು. ವೀರೇಂದ್ರ ಸಿಂಗ್ ನೇತೃತ್ವದ ಭಾರತ ತಂಡದಲ್ಲಿ ವಿವಿಧ ರಾಜ್ಯಗಳ 15 ಆಟಗಾರಿದ್ದರು. ಗಿಮಾದು ಮಾಲ್ಕಮ್ ಲಂಕಾ ತಂಡವನ್ನು ಮುನ್ನಡೆಸಿದರು.
ಐದನೆ ಮತ್ತು ಅಂತಿಮ ಏಕದಿನ ಪಂದ್ಯವನ್ನು ಭಾರತ 13 ರನ್‌ಗಳಿಂದ ಗೆದ್ದುಕೊಂಡಿತು. ಮೊದಲ ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 289 ರನ್ ಗಳಿಸಿತು. ನಂತರ ಲಂಕಾ ತಂಡವನ್ನು 48.4 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಮಾಡಿತು.
ಅಂತಿಮ ಪಂದ್ಯದಲ್ಲಿ ಭಾರತದ ಸಾಯಿ ಪ್ರಕಾಶ್ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ನಾಲ್ಕು ಪಂದ್ಯಗಳಿಂದ 12 ವಿಕೆಟ್ ಪಡೆದ ಶ್ರೀಲಂಕಾದ ಅಲನ್‌ರೋಸ್ ಕಲೆಪ್ ಸರಣಿ ಶ್ರೇಷ್ಠರಾದರು.
ಈ ಸರಣಿಯ ಆತಿಥ್ಯವನ್ನು ಭಾರತ ಕಿವುಡರ ಕ್ರಿಕೆಟ್ ಸಂಸ್ಥೆ (ಐಡಿಸಿಎ) ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.