ADVERTISEMENT

ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ: ದಕ್ಷಿಣ ಆಫ್ರಿಕಾ ಸರಣಿಗೆ ಸಜ್ಜು

ಕೆಲವರಿಂದ ಅವಕಾಶದ ಸದ್ಬಳಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 21:14 IST
Last Updated 14 ಅಕ್ಟೋಬರ್ 2025, 21:14 IST
<div class="paragraphs"><p>ಟ್ರೋಫಿ ಜೊತೆಗೆ ಸಂಭ್ರಮಿಸಿದ ಭಾರತ ತಂಡದ ಆಟಗಾರರು&nbsp;</p></div>

ಟ್ರೋಫಿ ಜೊತೆಗೆ ಸಂಭ್ರಮಿಸಿದ ಭಾರತ ತಂಡದ ಆಟಗಾರರು 

   

ಪಿಟಿಐ ಚಿತ್ರ

ನವದೆಹಲಿ: ವೆಸ್ಟ್‌ ಇಂಡೀಸ್ ತಂಡದ ಹೋರಾಟದ ಪರಿಣಾಮ ಅಂತಿಮ ದಿನದವರೆಗೆ ಬೆಳೆದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯವನ್ನು ಭಾರತ ಮಂಗಳವಾರ ಏಳು ವಿಕೆಟ್‌ಗಳಿಂದ ಸುಲಭವಾಗಿಯೇ ಗೆದ್ದುಕೊಂಡಿತು. ಸರಣಿಯನ್ನು ನಿರೀಕ್ಷೆಯಂತೆ 2–0 ಯಿಂದ ಕ್ಲೀನ್‌ಸ್ವೀಪ್ ಮಾಡಿತು. ಮುಂದಿನ ತಿಂಗಳ ಕಠಿಣ ದಕ್ಷಿಣ ಆಫ್ರಿಕಾ ಸರಣಿಗೆ ಸಜ್ಜಾಯಿತು.

ADVERTISEMENT

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗೆಲುವಿಗೆ 121 ರನ್‌ಗಳ ಗುರಿ ಎದುರಿಸಿದ್ದ ಭಾರತ 1 ವಿಕೆಟ್‌ಗೆ 63 ರನ್ ಗಳಿಸಿ ದಿನದಾಟ ಮುಂದುವರಿಸಿತು. ಗೆಲ್ಲಲು ಎಷ್ಟು ಹೊತ್ತು ಹಿಡಿಯಬಹುದೆಂಬ ಆಸಕ್ತಿಯಷ್ಟೇ ಉಳಿದಿತ್ತು. ಸರಿಯಾಗಿ ಒಂದು ಗಂಟೆಯಲ್ಲಿ ಈ ಔಪಚಾರವನ್ನು ಪೂರೈಸಿತು. ಇನಿಂಗ್ಸ್‌ಗೆ ಲಂಗರು ಹಾಕಿದ ಕೆ.ಎಲ್‌.ರಾಹುಲ್ (ಅಜೇಯ 58, 108ಎ, 4x6, 6x2) ಅವರು ಜೊಮೆಲ್ ವಾರಿಕನ್ ಬೌಲಿಂಗ್‌ನಲ್ಲಿ ಮಿಡ್‌ಆನ್‌ಗೆ ಬೌಂಡರಿ ಬಾರಿಸಿ ಗೆಲುವಿನ ರನ್ ಗಳಿಸಿದರು.

ಇದು ನಾಯಕನಾಗಿ ಗಿಲ್ ಅವರಿಗೆ ತವರಿನಲ್ಲಿ ಮೊದಲ ಸರಣಿ ಗೆಲುವು. ವೆಸ್ಟ್ ಇಂಡೀಸ್ ವಿರುದ್ಧ ಇದು ಭಾರತಕ್ಕೆ ಸತತ ಹತ್ತನೇ ಸರಣಿ ಜಯ. ಒಂದು ಕಾಲದಲ್ಲಿ ಜಗತ್ತಿನ ಪ್ರಬಲ ಶಕ್ತಿಯಾಗಿದ್ದ ವೆಸ್ಟ್‌ ಇಂಡೀಸ್‌ ತಂಡ 2002ರ ಮೇ ನಂತರ ಭಾರತ ವಿರುದ್ಧ ಒಂದೂ ಟೆಸ್ಟ್‌ ಗೆದ್ದಿಲ್ಲ. ಇಂಗ್ಲೆಂಡ್ ಸರಣಿಯಲ್ಲಿ ವಿಫಲರಾಗಿದ್ದ ಸಾಯಿ ಸುದರ್ಶನ್ ಅವರಿಗೆ ಇಲ್ಲಿ ಒಳ್ಳೆಯ ಅವಕಾಶ ದೊರೆಯಿತು. ಕುಲದೀಪ್ ಯಾದವ್ ಅವರಿಗೆ ಆ ಪ್ರವಾಸದಲ್ಲಿ ಒಂದೂ ಪಂದ್ಯ ಆಡುವ ಅವಕಾಶ ದೊರೆತಿರಲಿಲ್ಲ. ಇಲ್ಲಿ ದೊರೆತ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಕುಲದೀಪ್ ತಾವೆಷ್ಟು ಅಮೂಲ್ಯ ಆಟಗಾರ ಎಂಬುದನ್ನು ಸಾಬೀತುಪಡಿಸಿದರು.

ಇದಕ್ಕೆ ಮೊದಲು ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲೂ ಕುಲದೀಪ್ ಅವರು ಪರಿಣಾಮಕಾರಿ ಎನಿಸಿದ್ದರು. ವಿಶ್ವದ ಶ್ರೇಷ್ಠ ಸ್ಪಿನ್ನರ್‌ ತಾವೆಂಬುದನ್ನು ಕಲೆಗಾರಿಕೆ ಮೂಲಕ ತೋರಿಸಿಕೊಟ್ಟರು. ಮೊದಲ ಇನಿಂಗ್ಸ್‌ನಲ್ಲಿ 82 ರನ್ನಿಗೆ 5 ವಿಕೆಟ್‌ ಪಡೆದಿದ್ದರು. ಎರಡನೇ ಸರದಿಯಲ್ಲಿ ಮತ್ತೆ ಮೂರು ವಿಕೆಟ್‌ ಪಡೆದು ‘ಪಂದ್ಯದ ಆಟಗಾರ’ನಾದರು. ಕೋಟ್ಲದಂಥ ನಿರ್ಜೀವ ಪಿಚ್‌ನಲ್ಲೂ ಚಮತ್ಕಾರ ಮೆರೆದರು.

ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ಮತ್ತೆ ವಿಫಲರಾಗಿದ್ದರು. ಅವರ ಮೇಲೆ ಒತ್ತಡವಿತ್ತು. ಆದರೆ 23 ವರ್ಷದ ಎಡಗೈ ಆಟಗಾರ ಮೊದಲ ಇನಿಂಗ್ಸ್‌ನಲ್ಲಿ 87 ರನ್ ಬಾರಿಸುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದರು. ಅವರಿಗೆ ಈ ಇನಿಂಗ್ಸ್‌ ಅಗತ್ಯವಿದ್ದ ಆತ್ಮವಿಶ್ವಾಸ ತುಂಬಿತು.

ಈ ಸರಣಿಯಲ್ಲಿ ರಾಹುಲ್, ಜೈಸ್ವಾಲ್‌ ಮತ್ತು ಗಿಲ್‌ ಶತಕಗಳನ್ನು ಬಾರಿಸಿ ಇಂಗ್ಲೆಂಡ್‌ ವಿರುದ್ಧದ ಸರಣಿಯ ಯಶಸ್ಸನ್ನು ಇಲ್ಲೂ ಮುಂದುವರಿಸಿದರು. ರಾಹುಲ್ ಅವರು ನಾಲ್ಕನೇ ದಿನ ಕೊಟ್ಟ ಸುಳಿವು ಕ್ಯಾಂಪ್‌ಬೆಲ್‌ ವಿಕೆಟ್‌ ಪಡೆಯುವಲ್ಲಿ ಜಡೇಜಗೆ ನೆರವಾಯಿತು. ಹಿರಿಯ ಆಟಗಾರನಾಗಿ ಅವರು ನೆಟ್ಸ್‌ನಲ್ಲೂ ಯುವ ಆಟಗಾರರಿಗೆ ಸಲಹೆಗಳನ್ನು ನೀಡುತ್ತ ಬಂದಿದ್ದಾರೆ.

36 ವರ್ಷ ವಯಸ್ಸಿನ ಜಡೇಜ ತಮ್ಮ ಆಲ್‌ರೌಂಡ್‌ ಆಟಕ್ಕಾಗಿ ಸರಣಿಯ ಆಟಗಾರನಾದರು. ಪಂತ್‌ ಗಾಯಾಳಾದ ನಂತರ ಅವರು ಉಪನಾಯಕರಾಗಿದ್ದರು. ನಿಸ್ಸಂದೇಹವಾಗಿಯೂ ತಂಡದ ಪಾಲಿಗೆ ಅತಿ ಮೌಲ್ಯಯುತ ಆಟಗಾರ ಎನಿಸಿದರು. ಈ ಸರಣಿಯ ಸದುಪಯೋಗ ಪಡೆದ ಮತ್ತೊಬ್ಬರೆಂದರೆ ವಿಕೆಟ್‌ ಕೀಪರ್ ಧ್ರುವ್ ಜುರೆಲ್‌. ಗಾಯಾಳಾಗಿದ್ದ ಪಂತ್ ಅವರ ಬದಲು ಅವಕಾಶ ಪಡೆದ ಉತ್ತರ ಪ್ರದೇಶದ ಈ ಆಟಗಾರ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಇಲ್ಲಿ ಬಿರುಸಿನ 44 ರನ್ ಹೊಡೆದರು. ‌

ಆದರೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸಮರ್ಥವಾಗಿ ಬಳಸಿಕೊಳ್ಳದಿರುವುದು ಮಾತ್ರ  ಹಿನ್ನಡೆ ಎನಿಸಿತು. ಭಾರತ ಅನುಭವಿಸುತ್ತಿರುವ ಕೊರತೆ ಎಂದರೆ ವೇಗದ ಬೌಲಿಂಗ್ ಆಲ್‌ರೌಂಡರ್ ಸ್ಥಾನ. ತಂಡ ಆ ಸ್ಥಾನಕ್ಕೆ ನಿತೀಶ್‌ ಅವರನ್ನು ಬೆಳೆಸುತ್ತಿದೆ ಎಂದು ಗಿಲ್ ಪಂದ್ಯಕ್ಕೆ ಮೊದಲು ಹೇಳಿದ್ದರು. ಆದರೆ ಅವರು ಮೊದಲ ಟೆಸ್ಟ್‌ನಲ್ಲಿ ಬರೇ ನಾಲ್ಕು ಓವರ್ ಮಾಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಬೌಲ್‌ ಮಾಡಲಿಲ್ಲ. ನವದೆಹಲಿಯಲ್ಲಿ ತಂಡ 200 ಓವರ್‌ಗಳನ್ನು ಮಾಡಿದರೂ ನಿತೀಶ್ ಅವರಿಂದ ಗಿಲ್‌ ಒಂದೂ ಓವರ್‌ ಮಾಡಿಸಲಿಲ್ಲ. ಈ ಪಂದ್ಯದಲ್ಲಿ ವೇಗವಾಗಿ 43 ರನ್ ಗಳಿಸಿದ್ದೊಂದೇ ಅವರಿಗೆ ಸಮಾಧಾನದ ಅಂಶ.

ಭಾರತ ತಂಡ ಈಗ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.