ADVERTISEMENT

ಭಾರತ–ನ್ಯೂಜಿಲೆಂಡ್‌ ಟ್ವೆಂಟಿ–20 ನಾಳೆಯಿಂದ: ರೋಹಿತ್ ಬಳಗಕ್ಕೆ ಜಯದ ನಿರೀಕ್ಷೆ

ಕೇನ್ ವಿಲಿಯಮ್ಸನ್‌ ಇನಿಂಗ್ಸ್ ಆರಂಭ?

ಪಿಟಿಐ
Published 5 ಫೆಬ್ರುವರಿ 2019, 16:47 IST
Last Updated 5 ಫೆಬ್ರುವರಿ 2019, 16:47 IST
   

ವೆಲಿಂಗ್ಟನ್‌: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಏಕದಿನ ಸರಣಿಗಳನ್ನು ಗೆದ್ದು ವಿಜಯೋತ್ಸಾಹದಲ್ಲಿರುವ ಭಾರತ ತಂಡ ಈಗ ಟ್ವೆಂಟಿ–20 ಸರಣಿಗೆ ಸಜ್ಜಾಗಿದೆ. ಇಲ್ಲಿ ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಗೆಲ್ಲುವ ವಿಶ್ವಾಸದಲ್ಲಿರುವ ರೋಹಿತ್ ಶರ್ಮಾ ಬಳಗ ಮತ್ತೊಂದು ಮೈಲುಗಲ್ಲು ಸ್ಥಾಪಿಸುವ ಭರವಸೆಯಲ್ಲಿದೆ.

ನ್ಯೂಜಿಲೆಂಡ್‌ನಲ್ಲಿ ಈ ವರೆಗೆ ಟ್ವೆಂಟಿ–20 ಪಂದ್ಯವನ್ನು ಗೆಲ್ಲದ ಭಾರತ ತಂಡಕ್ಕೆ ಈ ಸರಣಿ ಸವಾಲಿನದ್ದಾಗಿದೆ. ನ್ಯೂಜಿಲೆಂಡ್‌ನಲ್ಲಿ ಭಾರತ 2009ರಲ್ಲಿ ಟ್ವೆಂಟಿ–20 ಸರಣಿಯನ್ನು ಆಡಿತ್ತು. ಆಗ 0–2ರಿಂದ ಸೋತಿತ್ತು. ಈಗ ಭಾರತ ತಂಡ ಬಲಿಷ್ಠವಾಗಿದೆ. ಏಕದಿನ ಸರಣಿಯಲ್ಲಿ ತಂಡದ ಸಾಮರ್ಥ್ಯ ಸಾಬೀತಾಗಿದೆ. ಅದೇ ಲಯವನ್ನು ಟ್ವೆಂಟಿ–20 ಸರಣಿಯಲ್ಲಿ ಮುಂದುವರಿಸಲು ತಂಡ ಪ್ರಯತ್ನಿಸಲಿದೆ.

ನ್ಯೂಜಿಲೆಂಡ್ ಒಳಗೊಂಡಂತೆ ಬಹುತೇಕ ಎಲ್ಲ ತಂಡಗಳು ಕಳೆದ ಎರಡು ವರ್ಷಗಳಿಂದ ಆರಂಭಿಕ ಜೋಡಿಯನ್ನು ಬದಲಿಸಿವೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ಹೆಚ್ಚಿನ ಬದಲಾವಣೆಗಳನ್ನು ಮಾಡಲಿಲ್ಲ. ಈ ಸರಣಿಗೆ ವಿರಾಟ್ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್ ಲಭ್ಯರಿಲ್ಲ. ಆದರೂ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಯಾವುದೇ ಧಕ್ಕೆ ಇಲ್ಲ. ರೋಹಿತ್ ಶರ್ಮಾ, ಶಿಖರ್‌ ಧವನ್‌, ಮಹೇಂದ್ರ ಸಿಂಗ್ ಧೋನಿ ಮತ್ತು ದಿನೇಶ್ ಕಾರ್ತಿಕ್‌ ಅವರಂಥ ಅನುಭವಿಗಳ ಜೊತೆಯಲ್ಲಿ ಶುಭಮನ್ ಗಿಲ್‌, ರಿಷಭ್ ಪಂತ್ ಮುಂತಾದ ಯುವ ಆಟಗಾರರು ನ್ಯೂಜಿಲೆಂಡ್ ಬೌಲರ್‌ಗಳಿಗೆ ಸವಾಲೊಡ್ಡಲು ಸಜ್ಜಾಗಿದ್ದಾರೆ.

ADVERTISEMENT

ಆತಂಕದಲ್ಲಿ ಆತಿಥೇಯರು:ಯಾವುದೇ ಸಂದರ್ಭದಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿರುವ ನ್ಯೂಜಿಲೆಂಡ್ ತಂಡ ಇತ್ತೀಚೆಗೆ ಟ್ವೆಂಟಿ–20 ಕ್ರಿಕೆಟ್‌ನಲ್ಲೂ ನಿರಾಶಾದಾಯಕ ಸಾಮರ್ಥ್ಯ ತೋರಿದೆ. ಇದು, ಕೇನ್ ವಿಲಿಯಮ್ಸನ್‌ ಅವರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಆಡಿದ ಏಳು ಪಂದ್ಯಗಳಲ್ಲಿ ಈ ತಂಡ ಕೇವಲ ಎರಡರಲ್ಲಿ ಗೆಲುವು ಸಾಧಿಸಿದೆ.

ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಗಾಯಗೊಂಡಿರುವ ಕಾರಣ ಈ ಸರಣಿಗೆ ಲಭ್ಯರಿಲ್ಲ. ಆದ್ದರಿಂದ ನಾಯಕ ಕೇನ್ ವಿಲಿಯಮ್ಸನ್‌ ಮೇಲೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಇದೆ. ಅವರಿಗೆ ಕಾಲಿನ್ ಮನ್ರೊ ಜೊತೆ ನೀಡಲಿದ್ದಾರೆ. ಆದರೆ ಇತ್ತೀಚೆಗೆ ವಿಲಿಯಮ್ಸನ್‌ ಉತ್ತಮ ಫಾರ್ಮ್‌ನಲ್ಲಿಲ್ಲ. ಇತ್ತೀಚಿನ 10 ಪಂದ್ಯಗಳಲ್ಲಿ ಅವರ ಸರಾಸರಿ ಕೇವಲ 32. ಒಟ್ಟು 54 ಟ್ವೆಂಟಿ–20 ಪಂದ್ಯಗಳ ಪೈಕಿ 27ರಲ್ಲಿ ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದಿದ್ದಾರೆ. ಆದರೆ ಹೆಚ್ಚು ಮಿಂಚಲು ಅವರಿಗೆ ಸಾಧ್ಯವಾಗಲಿಲ್ಲ.

ಇತ್ತೀಚಿನ 10 ಸರಣಿಗಳಲ್ಲಿ ಭಾರತ ಒಂದನ್ನೂ ಸೋತಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 12 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು 11ರಲ್ಲಿ ಗೆದ್ದಿದೆ.

ತಂಡಗಳು: ಭಾರತ:ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್‌, ಶುಭಮನ್ ಗಿಲ್‌, ರಿಷಭ್ ಪಂತ್‌, ದಿನೇಶ್ ಕಾರ್ತಿಕ್‌, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್‌), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೇದಾರ್ ಜಾಧವ್‌, ಭುವನೇಶ್ವರ್ ಕುಮಾರ್‌, ಖಲೀಲ್‌ ಅಹಮ್ಮದ್‌, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌.

ನ್ಯೂಜಿಲೆಂಡ್‌: ಕೇನ್ ವಿಲಿಯಮ್ಸನ್‌ (ನಾಯಕ), ಕಾಲಿನ್ ಮನ್ರೊ, ಟಿಮ್ ಸೀಫರ್ಟ್‌ (ವಿಕೆಟ್ ಕೀಪರ್‌), ರಾಸ್ ಟೇಲರ್‌, ಜೇಮ್ಸ್ ನೀಶಮ್‌, ಕಾಲಿನ್ ಗ್ರಾಂಡ್‌ಹೋಮ್‌, ಮಿಚೆಲ್ ಸ್ಯಾಂಟನರ್‌, ಸ್ಕಾಟ್ ಕುಗೆಲಿನ್‌, ಡಗ್‌ ಬ್ರೇಸ್‌ವೆಲ್‌, ಲೋಕಿ ಫೆರ್ಗುಸನ್‌, ಟಿಮ್ ಸೌಥಿ, ಇಶ್ ಸೋಧಿ.

ಪಂದ್ಯ ಆರಂಭ: ಮಧ್ಯಾಹ್ನ 12.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಕುಲದೀಪ್‌ ನೆಚ್ಚಿನ ಬೌಲರ್‌: ರವಿಶಾಸ್ತ್ರಿ

ಅನುಭವಿ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರಿಗೆ ಹೋಲಿಸಿದರೆ ಭಾರತ ತಂಡದ ಕುಲದೀಪ್ ಯಾದವ್‌ ವಿದೇಶಿ ನೆಲದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ ಎಂದು ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟರು. ಸಿಡ್ನಿಯಲ್ಲಿ ಐದು ವಿಕೆಟ್ ಗಳಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

‘ಮುಂದಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಮಣಿಗಂಟಿನ ಬೌಲರ್‌ಗಳು ಹೆಚ್ಚು ಮಿಂಚಲಿದ್ದಾರೆ. ಹೀಗಾಗಿ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರನ್ನು ಹಿಂದಿಕ್ಕಿ ಕುಲದೀಪ್‌ ತಂಡದ ನಂಬರ್ ಒನ್ ಸ್ಪಿನ್ನರ್ ಆಗಲಿದ್ದಾರೆ’ ಎಂದು ರವಿಶಾಸ್ತ್ರಿ ಹೇಳಿದರು.

ಕಂಡಂತೆ ಅಲ್ಲ ಪಿಚ್‌ ವರ್ತನೆ

ವೆಸ್ಟ್ ಪ್ಯಾಕ್ ಕ್ರೀಡಾಂಗಣದ ಪಿಚ್‌ ಮೇಲ್ನೋಟಕ್ಕೆ ಕಂಡಂತೆ ವರ್ತಿಸುವುದಿಲ್ಲ ಎಂಬುದು ಕ್ರಿಕೆಟ್ ಜಗತ್ತಿನ ಅನೇಕರನ್ನು ಅಚ್ಚರಿಗೆ ಈಡು ಮಾಡಿದೆ. ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಅತಿ ಹೆಚ್ಚು, 196 ರನ್‌ಗಳು ದಾಖಲಾಗಿದ್ದವು. ಇಂಗ್ಲೆಂಡ್‌ ಎದುರಿನ ಆ ಪಂದ್ಯದಲ್ಲಿ ಆತಿಥೇಯರು 12 ರನ್‌ಗಳಿಂದ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.