ADVERTISEMENT

ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರ?

ರಾಯಿಟರ್ಸ್
Published 26 ಜೂನ್ 2021, 13:23 IST
Last Updated 26 ಜೂನ್ 2021, 13:23 IST
ದುಬೈನಲ್ಲಿ 2018ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ
ದುಬೈನಲ್ಲಿ 2018ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ   

ಮುಂಬೈ: ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗಿದೆ ಎಂದು ಮಂಡಳಿಯ ಮೂಲಗಳು ಶನಿವಾರ ತಿಳಿಸಿವೆ. ಭಾರತದಲ್ಲಿ ಕೋವಿಡ್‌ ಆತಂಕ ಇನ್ನೂ ಕಡಿಮೆಯಾಗದಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ವರ್ಷ ಕೋವಿಡ್‌ನಿಂದಾಗಿ ಪರಿಸ್ಥಿತಿ ಬಿಗಡಾಯಿಸಿತ್ತು. ಹೀಗಾಗಿ ಐಪಿಎಲ್‌ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗಿತ್ತು. ಈ ವರ್ಷ ಭಾರತದಲ್ಲೇ ಟೂರ್ನಿ ಆಯೋಜಿಸಿದ್ದರೂ ಬಯೊಬಬಲ್‌ನಲ್ಲಿದ್ದ ಆಟಗಾರರಿಗೆ ಸೋಂಕು ತಗುಲಿದ್ದರಿಂದ ಮೇ ತಿಂಗಳಲ್ಲಿ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಉಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್‌ 17ರಂದು ಆರಂಭವಾಗಲಿದೆ. ಭಾರತದಲ್ಲೇ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಈಗ, ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ.

ADVERTISEMENT

‘ಭಾರತದಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಟೂರ್ನಿ ಆಯೋಜಿಸಿದರೂ ಮೂರನೇ ಅಲೆಯ ಆತಂಕದಿಂದ ಪ್ರಯಾಣ ನಿರ್ಬಂಧ ಹೇರುವ ಸಾಧ್ಯತೆ ಇರುವುದರಿಂದ ಕೆಲವು ರಾಷ್ಟ್ರಗಳ ಆಟಗಾರರಿಗೆ ಇಲ್ಲಿಗೆ ಬರಲು ಸಾಧ್ಯವಾಗದು. ಹೀಗಾಗಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವುದೇ ಸೂಕ್ತ. ಈ ಕುರಿತ ಅಂತಿಮ ನಿರ್ಧಾರವನ್ನು ಕೆಲವೇ ದಿನಗಳಲ್ಲಿ ಕೈಗೊಳ್ಳಲಾಗುವುದು. ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ತಿಳಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಐಸಿಸಿಯಿಂದ ಯಾವ ಮಾಹಿತಿಯೂ ಬಾರದ ಕಾರಣ ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟೂರ್ನಿಗೆ ಸಕಲ ಸೌಲಭ್ಯ

ವಿಶ್ವಕಪ್‌ನಂಥ ಟೂರ್ನಿಗೆ ಬೇಕಾದ ಸಕಲ ಸೌಲಭ್ಯ ಯುಎಇಯಲ್ಲಿ ಇದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ಕ್ರೀಡಾಂಗಣಗಳು ಇವೆ. ಐಪಿಎಲ್‌ನ ಉಳಿದ ಪಂದ್ಯಗಳಿಗೆ ತಾಣವಾಗಲಿರುವ ಯುಎಇ ಪಾಕಿಸ್ತಾನ ಸೂಪರ್‌ ಲೀಗ್‌ನ ಅಂತಿಮ ಲೆಗ್‌ನ 20 ಪಂದ್ಯಗಳಿಗೂ ಆತಿಥ್ಯ ವಹಿಸಿದೆ.

ವಿಶ್ವಕಪ್‌ ಕುರಿತ ಅಂತಿಮ ನಿರ್ಧಾರವನ್ನು ಜೂನ್ 28ರ ಒಳಗೆ ಐಸಿಸಿಗೆ ಬಿಸಿಸಿಐ ತಿಳಿಸಬೇಕು. ಟೂರ್ನಿ ಎಲ್ಲಿ ನಡೆದರೂ ಆತಿಥ್ಯದ ಅವಕಾಶ ಬಿಸಿಸಿಐಗೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.