ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌: ಐದನೇ ಸ್ಥಾನಕ್ಕೆ ಸರಿದ ಭಾರತ

ಪಿಟಿಐ
Published 29 ಜನವರಿ 2024, 13:50 IST
Last Updated 29 ಜನವರಿ 2024, 13:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ರಾಯಿಟರ್ಸ್ ಚಿತ್ರ

ದುಬೈ: ಹೈದರಾಬಾದ್‌ನಲ್ಲಿ ನಡೆದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಕೈಲಿ ಆಘಾತಕಾರಿ ಸೋಲನುಭವಿಸಿದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನಕ್ಕೆ ಸರಿದಿದೆ.

ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಈ ತಿಂಗಳ ಆರಂಭದಲ್ಲಿ 1–1 ರಲ್ಲಿ ಸಮ ಮಾಡಿಕೊಂಡಿದ್ದ ಭಾರತ ಅಲ್ಪಾವಧಿಗೆ ಅಗ್ರಸ್ಥಾನಕ್ಕೇರಿತ್ತು. ಆದರೆ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ನಂತರ ಆಸ್ಟ್ರೇಲಿಯಾ ತಂಡವು, ಭಾರತ ತಂಡವನ್ನು ಹಿಂದೆಹಾಕಿ ಮೊದಲ ಸ್ಥಾನಕ್ಕೆ ಮರಳಿತ್ತು.

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಗೆಲ್ಲಲು ಭಾರತ 231 ರನ್‌ಗಳ ಗುರಿಯನ್ನು ಎದುರಿಸಿತ್ತು. ಆದರೆ ಇಂಗ್ಲೆಂಡ್‌ನ ಸ್ಪಿನ್ನರ್ ಟಾಮ್‌ ಹಾರ್ಟ್ಲಿ (62ಕ್ಕೆ7) ಅವರ ದಾಳಿಗೆ ಸಿಲುಕಿ 202 ರನ್‌ಗಳಿಗೆ ಕುಸಿದಿತ್ತು. ತವರಿನಲ್ಲಿ ಅನುಭವಿಸಿದ ಈ ವಿರಳ ಸೋಲಿನಿಂದ ಭಾರತದ ಸ್ಥಾನ ಕುಸಿಯಿತು. ರೋಹಿತ್‌ ಶರ್ಮಾ ಬಳಗದ ಶೇಕಡವಾರು ಪಾಯಿಂಟ್ಸ್‌ 54.16 ರಿಂದ ಹಾಲಿ 43.33ಕ್ಕೆ ಇಳಿದಿದೆ.

ಆಸ್ಟ್ರೇಲಿಯಾ 55 ಪರ್ಸೆಂಟೇಜ್‌ ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದೆ. ಅದು ಎರಡನೇ ಟೆಸ್ಟ್‌ನಲ್ಲಿ ಭಾನುವಾರ ವೆಸ್ಟ್‌ ಇಂಡೀಸ್ ಎದುರು ಬ್ರಿಸ್ಬೇನ್‌ನಲ್ಲಿ ಎಂಟು ರನ್‌ಗಳ ಸೋಲು ಅನುಭವಿಸಿದರೂ ಅದರಿಂದ ಹೆಚ್ಚಿನ ಪರಿಣಾಮವಾಗಿಲ್ಲ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ಎಲ್ಲವೂ 50 ಪರ್ಸೆಂಟೇಜ್ ಪಾಯಿಂಟ್ಸ್‌ ಹೊಂದಿದ್ದು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಪಾಕಿಸ್ತಾನ, ವೆಸ್ಟ್‌ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ ಆರರಿಂದ ಒಂಬತ್ತರವರೆಗಿನ ಸ್ಥಾನಗಳನ್ನು ಪಡೆದಿವೆ.

ಡಬ್ಲ್ಯುಟಿಸಿ 2023–25ನೇ ಅವಧಿಗೆ ತಂಡಗಳು ಪ್ರತಿ ಟೆಸ್ಟ್ ಗೆಲುವಿಗೆ 12 ಪಾಹಯಿಂಟ್ಸ್, ಡ್ರಾಕ್ಕೆ ನಾಲ್ಕು ಪಾಯಿಂಟ್‌ ಮತ್ತು ಟೈ ಆದರೆ ಆರು ಪಾಯಿಂಟ್ಸ್ ಪಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.