
ಹಾರ್ದಿಕ್ ಪಾಂಡ್ಯ
ಕಟಕ್: ಗಾಯದಿಂದಾಗಿ ದೀರ್ಘ ಕಾಲ ವಿಶ್ರಾಂತಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಮಂಗಳವಾರ ದಕ್ಷಿಣ ಆಫ್ರಿಕಾ ಎದುರು ತಮ್ಮ ಆಲ್‌ರೌಂಡ್ ಆಟದ ಸಾಮರ್ಥ್ಯವನ್ನು ಮೆರೆದರು. ಆ ಮೂಲಕ ತಾವು ಫಿಟ್ ಆಗಿರುವ ಸಂದೇಶವನ್ನು ರವಾನಿಸಿದರು.
ಅವರ ಅಮೋಘ ಅರ್ಧಶತಕ ಮತ್ತು ಶಿಸ್ತಿನ ದಾಳಿಯಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ 101 ರನ್‌ಗಳ ಭಾರಿ ಜಯವನ್ನು ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 12 ಓವರ್‌ಗಳಾಗು ವಷ್ಟರಲ್ಲಿ 78 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಹಾರ್ದಿಕ್ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳಿದ್ದ 59 ರನ್‌ಗಳನ್ನು 28 ಎಸೆತಗಳಲ್ಲಿ ಗಳಿಸಿದರು. ಇದರಿಂದಾಗಿ ಆತಿಥೇಯ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬಳಗವನ್ನು ಕಟ್ಟಿಹಾಕುವಲ್ಲಿಯೂ ಹಾರ್ದಿಕ್ (16ಕ್ಕೆ1) ತಮ್ಮ ಕಾಣಿಕೆ ನೀಡಿದರು. ಅವರಲ್ಲದೇ ಉಳಿದ ಬೌಲರ್‌ಗಳ ಸಂಘಟಿತ ಆಟವು ಭಾರತ ತಂಡಕ್ಕೆ ಜಯವನ್ನು ಬೇಗನೆ ತಂದುಕೊಟ್ಟಿತು. ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಕ್ವಿಂಟನ್ ಡಿ ಕಾಕ್ ವಿಕೆಟ್ ಗಳಿಸಿದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅಮೋಘ ಆರಂಭ ನೀಡಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ ವಿಕೆಟ್ ಕೂಡ ಪಡೆದರು.
ಇದೇ ಹಾದಿಯಲ್ಲಿ ಸಾಗಿದ ಜಸ್‌ಪ್ರೀತ್ ಬೂಮ್ರಾ (17ಕ್ಕೆ2), ವರುಣ್ ಚಕ್ರವರ್ತಿ (19ಕ್ಕೆ2), ಅಕ್ಷರ್ ಪಟೇಲ್ (7ಕ್ಕೆ2) ಮತ್ತು ಶಿವಂ ದುಬೆ (1ಕ್ಕೆ1) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ದಕ್ಷಿಣ ಆಫ್ರಿಕಾ 12.3 ಓವರ್‌ಗಳಲ್ಲಿ 74 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಇದು ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಹಾರ್ದಿಕ್ ಬೀಸಾಟ: ತಂಡವು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಹಾರ್ದಿಕ್ ಅವರು ಅಕ್ಷರ್ ಪಟೇಲ್ (10 ರನ್) ಜೊತೆಗೆ 26 ರನ್ ಸೇರಿಸಿದರು. ಅಕ್ಷರ್ ಔಟಾದ ನಂತರ ಹಾರ್ದಿಕ್ ಮತ್ತಷ್ಟು ವೇಗವಾಗಿ ಆಡಿದರು. ಅವರ ಬೀಸಾಟಕ್ಕೆ ಎದುರಾಳಿ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್ ನಿರ್ವಹಿಸಲು ಪರದಾಡಿದರು. ಹಾರ್ದಿಕ್ ಮತ್ತು ಶಿವಂ ದುಬೆ ಸೇರಿ 6ನೇ ವಿಕೆಟ್ ಜತೆಯಾಟದಲ್ಲಿ 33 ರನ್ ಸೇರಿಸಿದರು.
ಆಫ್‌ಬ್ರೇಕ್ ಬೌಲರ್ ಡೊನೊವ್ಯಾನ್ ಫೆರಿರಾ ಅವರ ಎಸೆತದಲ್ಲಿ ಶಿವಂ ದುಬೆ ಕ್ಲೀನ್‌ಬೌಲ್ಡ್ ಆದರು. ಜತೆಯಾಟ ಮುರಿ ಯಿತು. ಆದರೆ ಹಾರ್ದಿಕ್ ಅವರ ಆಟಕ್ಕೆ ಕಡಿವಾಣ ಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. 25 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಅವರೊಂದಿಗೆ ಜಿತೇಶ್ ಶರ್ಮಾ (ಔಟಾಗದೇ 10) ಕೂಡ ಬೀಸಾಟವಾಡಿದರು. ಮುರಿಯದ ಏಳನೇ ವಿಕೆಟ್ ಜತೆಯಾಟದಲ್ಲಿ 38 ರನ್ ಸೇರಿಸಿದರು. ಹಾರ್ದಿಕ್ ಅವರು ತೊಡೆಸ್ನಾಯುವಿನ ಗಾಯದಿಂದ ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆಯಲ್ಲಿದ್ದರು.
ಆರಂಭಿಕ ಆಘಾತ ನೀಡಿದ ಲುಂಗಿ: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ವೇಗಿ ಲುಂಗಿ ಎನ್‌ಗಿಡಿ (31ಕ್ಕೆ3) ಆರಂಭಿಕ ಆಘಾತ ನೀಡಿದರು. ಲುಂಗಿ ಅವರು ಇನಿಂಗ್ಸ್‌ನ ಮೊದಲ ಓವರ್‌ನ 3ನೇ ಎಸೆತದಲ್ಲಿಯೇ ಶುಭಮನ್ ಗಿಲ್ ವಿಕೆಟ್ ಗಳಿಸಿದರು. ಮೂರನೇ ಓವರ್‌ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ (12 ರನ್) ಕೂಡ ವಿಕೆಟ್ ಕೂಡ ಲುಂಗಿ ಪಾಲಾಯಿತು.
ಆದರೆ ಸಿಡಿಲಮರಿ ಅಭಿಷೇಕ್ ಶರ್ಮಾ (17; 12ಎ) ತಮ್ಮ ಎಂದಿನ ಹೊಡಿ ಬಡಿ ಆಟವಾಡುತ್ತ ಇನ್ನೊಂದು ಬದಿಯಲ್ಲಿದ್ದರು. ಆದ್ದರಿಂದ ಭರವಸೆ ಬಾಕಿ ಇತ್ತು. ಪವರ್‌ಪ್ಲೇ ಮುಗಿದ ನಂತರ ವೇಗಿ ಲುಥೋ ಸಿಪಾಮ್ಲಾ ಅವರ ಬೌಲಿಂಗ್‌ನಲ್ಲಿ ಅಭಿಷೇಕ್ ಔಟಾದರು.
ಈ ಹಂತದಲ್ಲಿ ತಿಲಕ್ ವರ್ಮಾ (26; 32ಎ) ಮತ್ತು ಅಕ್ಷರ್ ಪಟೇಲ್ (23 ರನ್) ಅವರು ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು. ವಿಕೆಟ್ ಉಳಿಸಿಕೊಳ್ಳಲು ಯತ್ನಿಸಿದರು. ಆಗ ಮತ್ತೆ ಚುರುಕಿನ ದಾಳಿ ನಡೆಸಿದ ಲುಂಗಿ ಎಸೆತದಲ್ಲಿ ವರ್ಮಾ ಅವರು ಯಾನ್ಸೆನ್‌ಗೆ ಕ್ಯಾಚಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.