
ರಿಷಭ್ ಪಂತ್
(ಪಿಟಿಐ ಚಿತ್ರ)
ಗುವಾಹಟಿ: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಮಬಲಗೊಳಿಸಲು ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಶನಿವಾರದಿಂದ (ನ.22) ಗುವಾಹಟಿಯ ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಎರಡನೇ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕವೆನಿಸಿದೆ.
ಕೋಲ್ಕತದ ಐತಿಹಾಸಿಕ ಈಡನ್ ಗಾರ್ಡನ್ ಮೈದಾನದಲ್ಲಿ ಅವಕಾಶ ಕೈಚೆಲ್ಲಿದ ಭಾರತ 30 ರನ್‌ಗಳ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಕೊನೆಯ ಇನಿಂಗ್ಸ್‌ನಲ್ಲಿ 124 ರನ್ ಬೆನ್ನಟ್ಟುವಲ್ಲಿ ವಿಫಲವಾಗಿತ್ತು.
ನಾಯಕ ಶುಭಮನ್ ಗಿಲ್ ಅವರ ಗಾಯದ ಸಮಸ್ಯೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಂತಿಮ ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನವೆನಿಸಿದೆ.
ಇದರೊಂದಿಗೆ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸುವುದು ಖಚಿತವೆನಿಸಿದೆ. ಆ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ತಂಡದ 38ನೇ ನಾಯಕರೆನಿಸಲಿದ್ದಾರೆ.
ಇನ್ನು ಗಿಲ್ ಸ್ಥಾನಕ್ಕೆ ಸಾಯಿ ಸುದರ್ಶನ್ ಹಾಗೂ ಕರ್ನಾಟಕದ ದೇವದತ್ತ ಪಡಿಕ್ಕಲ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮೂರನೇ ಕ್ರಮಾಂಕದಲ್ಲಿ ಆಡಿರುವುದರಿಂದ ಸುದರ್ಶನ್ ಅವರನ್ನೇ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.
ಇನ್ನೊಂದು ವೇಳೆ ಮೊದಲ ಟೆಸ್ಟ್‌ನಂತೆ ಅಂತಿಮ ಪಂದ್ಯದಲ್ಲೂ ವಾಷಿಂಗ್ಟನ್ ಸುಂದರ್ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದರೆ ಸುದರ್ಶನ್ ಆರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ.
ಮೊದಲ ಪಂದ್ಯದಲ್ಲಿ ಭಾರತ ನಾಲ್ವರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳ ರಣತಂತ್ರದೊಂದಿಗೆ ಕಣಕ್ಕಿಳಿದಿತ್ತು. ಇದರಲ್ಲಿ ಮೂವರು ಆಲ್‌ರೌಂಡರ್ ಒಳಗೊಂಡಿದ್ದರು.
ಇನ್ನು ಪಿಚ್‌ನಲ್ಲಿ ವೇಗಿಗಳಿಗೆ ನೆರವು ಸಿಗುವುದಾದರೆ ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆಯಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಪ್ರತಿಯೊಂದು ಪಂದ್ಯದ ಫಲಿತಾಂಶವೂ ಹೆಚ್ಚು ಮಹತ್ವದೆನಿಸುತ್ತದೆ. ಈ ನಿಟ್ಟಿನಲ್ಲಿ ಸರಣಿ ಸಮಬಲಗೊಳಿಸುವ ಒತ್ತಡ ಭಾರತದ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.